ರಾಂಚಿ: ಮೇವು ಹಗರಣಗಳ ಪ್ರಕರಣದ ಅಪರಾಧಿ ಬಿಹಾರ ಮಾಜಿ ಮುಖ್ಯಮಂತ್ರಿ, ಆರ್ ಜೆಡಿ ಮುಖ್ಯಸ್ಥ ಲಾಲುಪ್ರಸಾದ್ ಯಾದವ್ ಷರತ್ತುಬದ್ಧ ಜಾಮೀನು ಅವಧಿ ಮುಗಿದ ಹಿನ್ನೆಲೆಯಲ್ಲಿ ಗುರುವಾರ ಜಾರ್ಖಂಡ್ ನ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ಶರಣಾಗಿದ್ದಾರೆ.
ಲಾಲುಪ್ರಸಾದ್ ಸಿಬಿಐ ಕೋರ್ಟ್ ನತ್ತ ಆಗಮಿಸಿದ್ದ ಸಂದರ್ಭದಲ್ಲಿ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ದರು ಎಂದು ಎಎನ್ ಐ ವರದಿ ಮಾಡಿದೆ.
ಆಗಸ್ಟ್ 24ರ ವಿಚಾರಣೆವರೆಗೆ ಯಾವುದೇ ರೀತಿಯಲ್ಲೂ ಜಾಮೀನು ಅವಧಿಯನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ಜಾರ್ಖಂಡ್ ಹೈಕೋರ್ಟ್ ಆದೇಶ ನೀಡಿ, ಆಗಸ್ಟ್ 30ರಂದು ಸಿಬಿಐ ಕೋರ್ಟ್ ಗೆ ಶರಣಾಗುವಂತೆ ಸೂಚಿಸಿತ್ತು. ಈ ನಿಟ್ಟಿನಲ್ಲಿ ಲಾಲುಪ್ರಸಾದ್ ಬುಧವಾರ ಪಾಟ್ನಾದಿಂದ ರಾಂಚಿಗೆ ಆಗಮಿಸಿದ್ದು, ಇಂದು ಕೋರ್ಟ್ ಗೆ ಶರಣಾಗಿರುವುದಾಗಿ ವರದಿ ತಿಳಿಸಿದೆ.
ಮೇವು ಹಗರಣದಲ್ಲಿ ಲಾಲೂ ಪ್ರಸಾದ್ ಯಾದವ್ ಗೆ ಕಳೆದ ಡಿಸೆಂಬರ್ ತಿಂಗಳಿನಲ್ಲಿ ಜೈಲುಶಿಕ್ಷೆ ವಿಧಿಸಿತ್ತು. ಬಳಿಕ ಅನಾರೋಗ್ಯದ ಕಾರಣದಿಂದ ಕೋರ್ಟ್ ಪೆರೋಲ್ ಮೇಲೆ ಬಿಡುಗಡೆ ಮಾಡಿತ್ತು. ಏತನ್ಮಧ್ಯೆ ಲಾಲು ರಾಂಚಿಯ ಆರ್ ಐಎಂಎಸ್ ಆಸ್ಪತ್ರೆ, ನವದೆಹಲಿಯ ಏಮ್ಸ್ ಆಸ್ಪತ್ರೆ ಹಾಗೂ ಮುಂಬೈಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಆಗಸ್ಟ್ 25ರಂದು ಡಿಸ್ ಚಾರ್ಜ್ ಮಾಡಲಾಗಿತ್ತು