ಪಾಟ್ನಾ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಹಾರ ಎನ್ಡಿಎ ಮೈತ್ರಿ ಕೂಟದ ನಾಲ್ಕು ಪಕ್ಷಗಳ ನಡುವೆ ಸೀಟು ಹಂಚಿಕೆ ಅಂತ್ಯವಾಗಿದ್ದು ,40 ಸ್ಥಾನಗಳ ಪೈಕಿ ಬಿಜೆಪಿ 20 ಸ್ಥಾನಗಳಲ್ಲಿ ಸ್ಪರ್ಧಿಸಲು ನಿರ್ಧಾರವಾಗಿದೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಜೆಡಿಯು ನಾಯಕ,ಬಿಹಾರ ಸಿಎಂ ನಿತಿಶ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಸೀಟು ಹಂಚಿಕೆ ಅಂತ್ಯಗೊಳಿಸಲಾಗಿದ್ದು, ಅಭ್ಯರ್ಥಿಗಳ ಆಯ್ಕೆ ಇನ್ನಷ್ಟೇ ನಡೆಯಬೇಕಾಗಿದೆ ಎಂದು ತಿಳಿದು ಬಂದಿದೆ.
ಸಂಘಟಿತ ಶಕ್ತಿಯಿಂದ ಎಲ್ಲಾ 40 ಸ್ಥಾನಗಳನ್ನೂ ಗೆಲ್ಲಲು ರಣತಂತ್ರ ಹೂಡಿರುವ ಅಮಿತ್ ಶಾ ಅವರು ಜೆಡಿಯುಗೆ 12 ಸ್ಥಾನಗಳು ,ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಎಲ್ಜೆಪಿಗೆ 6 ಸ್ಥಾನಗಳು ಮತ್ತು ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ ಅವರ ಆರ್ಎಲ್ಎಸ್ಪಿಗೆ 2 ಸ್ಥಾನಗಳನ್ನು ಹಂಚಿಕೆ ಮಾಡಲು ಒಪ್ಪಿಕೊಂಡಿದ್ದಾರೆ
2014 ರಲ್ಲಿ 22 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ 2 ಸ್ಥಾನಗಳನ್ನು ಮೈತ್ರಿ ಧರ್ಮಕ್ಕೆ ಸರಿಯಾಗಿ ಕಳೆದುಕೊಳ್ಳಬೇಕಾಗಿದೆ. ಕೆಲ ಹಾಲಿ ಸಂಸದರಿಗೆ ಈ ಬಾರಿ ಬಿಜೆಪಿ ಟಿಕೆಟ್ ಸಿಗುವ ಅನುಮಾನಗಳಿವೆ ಎಂದು ವರದಿಯಾಗಿದೆ.
ಇನ್ನೊಂದೆಡೆ ಆರ್ಜೆಡಿ -ಕಾಂಗ್ರೆಸ್ ಮೈತ್ರಿಕೂಟ ಎನ್ಡಿಎ ಮೈತ್ರಿಕೂಟಕ್ಕೆ ಸೆಡ್ಡು ಹೊಡೆಯಲು ರಣತಂತ್ರ ಹೂಡಿದೆ.
ಬಿಜೆಪಿ 2014 ರಲ್ಲಿ 22 ಸ್ಥಾನಗಳು,ಮೈತ್ರಿ ಪಕ್ಷಗಳಾದ ಎಲ್ಜೆಪಿ 6 , ಆರ್ಎಲ್ಎಸ್ಪಿ 3 ಸೇರಿ 31 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಬಿಜೆಪಿಯಿಂದ ದೂರ ಉಳಿದು ಭಾರೀ ಹೊಡೆತಕ್ಕೆ ಗುರಿಯಾಗಿದ್ದ ಜೆಡಿಯು ಕೇವಲ 2 ಸ್ಥಾನಗಳನ್ನು ಮಾತ್ರ ಗೆದ್ದಿತ್ತು. ಆರ್ಜೆಡಿ 4, ಎನ್ಸಿಪಿ 1, ಕಾಂಗ್ರೆಸ್ 2 ಸ್ಥಾನಗಳನ್ನು ಗೆದ್ದಿತ್ತು.
ಮೈತ್ರಿ ಉತ್ತರ ಪ್ರದೇಶ ಮತ್ತು ಜಾರ್ಖಂಡ್ನಲ್ಲೂ ಮುಂದುವರಿಯಲಿದ್ದು, ಬಿಜೆಪಿ ತಲಾ 1 ಲೋಕಸಭಾ ಸ್ಥಾನವನ್ನು ಜೆಡಿಯುಗೆ ಬಿಟ್ಟು ಕೊಡುವ ಬಗ್ಗೆ ಮಾತುಕತೆಗಳು ನಡೆದಿವೆ.