ಕೇರಳ ಪ್ರವಾಹ: 483 ಮಂದಿ ಸಾವು; ಇನ್ನೂ ಪತ್ತೆಯಾಗದ 15 ಜನ

ತಿರುವನಂತಪುರಂ: ಕೇರಳದಲ್ಲಿ ಸಂಭವಿಸಿದ ಭೀಕರ ಮಳೆ ಹಾಗೂ ಜಲಪ್ರವಾಹಕ್ಕೆ ಇದುವರೆಗೆ 483 ಮಂದಿ ಸಾವನ್ನಪ್ಪಿದ್ದು, 15 ಮಂದಿ ಇನ್ನೂ ಪತ್ತೆಯಾಗಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯ್ ವಿಜಯನ್ ತಿಳಿಸಿದ್ದಾರೆ.

ಪ್ರವಾಹ ಕುರಿತು ಚರ್ಚಿಸಲು ಕರೆಯಲಾಗಿರುವ ಒಂದು ದಿನದ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಸಿಎಂ ವಿಜಯನ್, ಶತಮಾನದ ಅತ್ಯಂತ ಭೀಕರ ಪ್ರವಾಹ ಇದಾಗಿದ್ದು, 14.5 ಲಕ್ಷ ಜನರು ನಿರಾಶ್ರಿತ ಕೇಂದ್ರಗಳಲ್ಲಿದ್ದಾರೆ ಎಂದರು.

ಒಟ್ಟು 57 ಸಾವಿರ ಹೆಕ್ಟೆರ್ ಕೃಷಿ ಭೂಮಿಯಲ್ಲಿ ಬೆಳೆ ಹಾನಿಯಾಗಿದೆ. ರಾಜ್ಯದ ವಾರ್ಷಿಕ ಹಣಹೂಡಿಕೆಗಿಂತ ಹೆಚ್ಚು ನಷ್ಟವಾಗಿದೆ ಎಂದರು. ಪ್ರವಾಹದಿಂದಾದ ಹಾನಿಯ ಕುರಿತು ಅಂತಿಮ ಮೌಲ್ಯಮಾಪನದ ನಂತರ ಕೇರಳ ಸರ್ಕಾರ ಕೇಂದ್ರದಿಂದ ಹೆಚ್ಚಿನ ನೆರವಿನ ನಿರೀಕ್ಷೆಯಲ್ಲಿದೆ ಎಂದು ತಿಳಿಸಿದರು.

ಕೇರಳ ಪ್ರವಾಹಕ್ಕೆ ವಿಶ್ವದ ವಿವಧ ಸಂಸ್ಥೆಗಳು ನೆರವು ನೀಡಲು ಮುಂದೆ ಬಂದಿವೆ. ವಿಶ್ವ ಬ್ಯಾಂಕ್ ತಂಡ ಸಹ ಸರ್ಕಾರದ ಮುಖ್ಯ ಕಾರ್ಯದರ್ಶಿಯೊಂದಿಗೆ ಚರ್ಚಿಸಿದೆ. ನಮ್ಮ ರಾಜ್ಯದ ಹಿತಾಸಕ್ತಿಗಳಿಗೆ ಅನುಗುಣವಾಗಿದ್ದರೆ, ಯಾವುದೇ ಭಾಗದಿಂದಲೂ ಸಹಾಯವನ್ನು ಸ್ವೀಕರಿಸುವುದು ರಾಜ್ಯದ ನಿಯಮವಾಗಿದೆ ಎಂದು ಪಿಣರಾಯ್ ವಿಜಯನ್ ಹೇಳಿದರು.

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಇದುವರೆಗೆ ಒಟ್ಟು 730 ಕೋಟಿ ರುಪಾಯಿ ದೇಣಿಗೆ ಬಂದಿದೆ. ಆಭರಣಗಳು ಮತ್ತು ಭೂಮಿ ರೂಪದಲ್ಲಿಯೂ ದೇಣಿಗೆ ನೀಡಲಾಗುತ್ತಿದೆ ಎಂದು ವಿವರಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ