ಕನಿಷ್ಠ 1 ಕೋಟಿಯಾದ್ರು ಖರ್ಚು ಮಾಡಿ: ಕೃಷ್ಣಬೈರೆಗೌಡ

ಹುಬ್ಬಳ್ಳಿ-: ಇಂದು ಗ್ರಾಮೀಣಾಭಿವೃದ್ಧಿ , ಪಂಚಾಯತ್ ರಾಜ್ ,ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಕೃಷ್ಣ ಭೈರೇಗೌಡ ಅವರು, ಯರಿನಾರಾಯಣಪುರ ಮತ್ತು ಇತರ 14 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಬಹುಗ್ರಾಮ ಯೋಜನೆಯ ಸ್ಥಳ, ಶುದ್ಧ ಕುಡಿಯುಚ ನೀರು ಘಟಕ, ಕಿರೇಸೂರ ಗ್ರಾ.ಪಂ. ಗೆ ಭೇಟಿ ನೀಡಿ ಗ್ರಾಮದ ಜನಸಂಖ್ಯೆ, ಸಿಬ್ಬಂದಿ, ಸ್ವಚ್ಛ ಭಾರತ ಯೋಜನೆಯಲ್ಲಿ ನಿರ್ಮಿಸಿದ ಶೌಚಾಲಯಗಳನ್ನು ಸಾರ್ವಜನಿಕರು ಬಳಸುತ್ತಿರುವ ಬಗ್ಗೆ ಮಾಹಿತಿ ಪಡೆದರು. ಜಾಗೆ ಕೊರತೆ ಇರುವಲ್ಲಿ ವ್ಯಯಕ್ತಿಕ ಶೌಚಾಲಯಗಳನ್ನು ಸಾಲಾಗಿ ನಿರ್ಮಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಬೇಕು. ಸಾಮೂಹಿಕ ಶೌಚಾಲಯಗಳನ್ನು ಕಟ್ಟದಿರಲು ಸಚಿವರು ಸೂಚನೆ ನೀಡಿದರು. ಕಸ ವಿಲೇವಾರಿ ,ಮನೆಗಳ ಕಸ ನಿರ್ವಹಣೆ ವ್ಯವಸ್ಥಿತವಾಗಿ ನಡೆಯುತ್ತಿದೆಯೇ ಎಂದು ಮಾಹಿತಿ ಪಡೆದರು. ನರೇಗಾ ಯೋಜನೆಯಡಿ ನಿರ್ಮಿಸಲಾಗಿರುವ ರೈತರ ಕಣ ಮತ್ತು ಸಿಸಿ ರಸ್ತೆಗಳನ್ನು ಪರಿಶೀಲಿಸಿದರು. ಕಿರೇಸೂರಿನಲ್ಲಿ ಸಸಿಗಳನ್ನು ನೆಟ್ಟು, ಶುದ್ಧ ಕುಡಿಯುವ ನೀರು ಘಟಕದ ಕಾರ್ಯ ವೀಕ್ಷಿಸಿದರು. ನರೇಗಾದಲ್ಲಿ ಗ್ರಾಮ ಪಂಚಾಯತಿಗಳೇ ನೇರವಾಗಿ ಚೆಕ್ ಡ್ಯಾಂ ನಿರ್ಮಿಸಬೇಕು. ಕೈಯಲ್ಲಿ ಅಧಿಕಾರ ಇದೆ ಗ್ರಾಮ ಪಂಚಾಯತಿಗಳು ಕಾರ್ಯೋನ್ಮುಖವಾಗಬೇಕು. ಕ್ರಿಯಾ ಯೋಜನೆಯಲ್ಲಿ ಹೆಚ್ಚು ಚೆಕ್ ಡ್ಯಾಮುಗಳನ್ನು ಇದುವರೆಗೆ ಯಾಕೆ ತೆಗೆದುಕೊಳ್ಳಲಿಲ್ಲ ಎಂದು ಗ್ರಾ.ಪಂ.ಅಧಿಕಾರಿಗಳನ್ನು ಪ್ರಶ್ನಿಸಿದರು. ಪ್ರತಿವರ್ಷ ಗ್ರಾಮದ ಜಾಬ್ ಕಾರ್ಡುಗಳ ಸಂಖ್ಯೆಗೆ ಅನುಗುಣವಾಗಿ ಪ್ರತಿ ಗ್ರಾಮ ಪಂಚಾಯತಿಯಲ್ಲಿ ನರೇಗಾ ಯೋಜನೆಯಡಿ ೪ ಕೋಟಿ ರೂ.ಖರ್ಚು ಮಾಡಲು ಅವಕಾಶವಿದೆ. ಕನಿಷ್ಠ ೧ ಕೋಟಿ ರೂ.ಗಳನ್ನಾದರೂ ಖರ್ಚು ಮಾಡಿ ಪ್ರಗತಿ ಸಾಧಿಸಲು ಸಚಿವರ ಸೂಚನೆ ನೀಡಿದರು. ನರೇಗಾದ ಕೂಲಿ ಹಣವನ್ನು ರೈತರ ಸಾಲದ ಖಾತೆಗಳಿಗೆ ಜಮೆ ಮಾಡದಿರಲು ರಾಜ್ಯ ಮಟ್ಟದ ಬ್ಯಾಂಕರುಗಳ ಸಭೆಯಲ್ಲಿ ಸೂಚಿಸಲಾಗಿದೆ. ಕಿರೇಸೂರು ಗ್ರಾಮ ಪಂಚಾಯತಿಯಲ್ಲಿ ಶೇ.೬೦ ರಷ್ಟೂ ಸಹ ತೆರಿಗೆ ಸಂಗ್ರಹವಾಗಿಲ್ಲ. ಇದನ್ನು ನಿರ್ಲಕ್ಷಿಸಬಾರದು. ಅದು ಗ್ರಾಮದ ಅಭಿವೃದ್ಧಿಗೆ ಅಗತ್ಯ. ವರ್ಷಕ್ಕೆ ನೂರರಿಂದ ಎರಡು ನೂರು ರೂ. ತೆರಿಗೆ ಕಟ್ಟಲು ಜನ ಹಿಂಜರಿಯುವದಿಲ್ಲ ಗ್ರಾ.ಪಂ.ಅಧಿಕಾರಿಗಳು, ಸಿಬ್ಬಂದಿ ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ