ಮೂಲವೇತನದೊಂದಿಗೆ ಸವಲತ್ತು ಮುಂದುವರಿಸಿ; ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಒತ್ತಾಯ

ಬೆಂಗಳೂರು, ಆ.29-ಕುಮಾರನಾಯ್ಕ ವರದಿ ಅನ್ವಯ ಪ್ರೌಢಶಾಲಾ ಶಿಕ್ಷಕರಿಗೆ ನೀಡಲಾಗಿರುವ ವಾರ್ಷಿಕ ವಿಶೇಷ ಬಡ್ತಿಯನ್ನು ಮೂಲ ವೇತನದಿಂದ ಪ್ರತ್ಯೇಕಿಸಿ ವೈಯಕ್ತಿಕ ವೇತನವೆಂದು ಪರಿಗಣಿಸಿ ಸವಲತ್ತು ಕಡಿತಗೊಳಿಸಿರುವ ಕ್ರಮವನ್ನು ಕೈಬಿಟ್ಟು ಮೂಲವೇತನದೊಂದಿಗೆ ಮುಂದುವರೆಸಬೇಕೆಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಚ್.ಕೆ.ಮಂಜುನಾಥ್, ಆಗಸ್ಟ್ 1 ರ ನಂತರ ಪ್ರಾಥಮಿಕ ಶಾಲೆಯಿಂದ ಮುಂಬಡ್ತಿ ಹಾಗೂ ನೇರ ನೇಮಕಾತಿ ಮೂಲಕ ಆಯ್ಕೆಯಾಗಿ ಪ್ರೌಢಶಾಲಾ ಸಹಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ 400 ರೂ. ವಿಶೇಷ ಭತ್ಯೆ ಮಂಜೂರು ಮಾಡಬೇಕು, ಆರನೇ ವೇತನ ಆಯೋಗ ಶಿಫಾರಸು ಅನ್ವಯ ವಾರ್ಷಿಕ ಬಡ್ತಿಯನ್ನು ಮಂಜೂರು ಮಾಡಬೇಕು. ಪ್ರೌಢಶಾಲಾ ಸಹಶಿಕ್ಷಕರಿಂದ ಮುಖ್ಯೋಪಾಧ್ಯಾಯರ ಹುದ್ದೆಗೆ ಬೆಂಗಳೂರು, ಕಲಬುರಗಿ, ಧಾರವಾಡ ಆಯುಕ್ತಾಲಯಗಳಲ್ಲಿ ಕೂಡಲೇ ಮುಂಬಡ್ತಿ ನೀಡಬೇಕೆಂದು ಆಗ್ರಹಿಸಿದರು.

ಸಂಯುಕ್ತ ಪದವಿ ಪೂರ್ವ ಕಾಲೇಜುಗಳ ಪ್ರೌಢಶಾಲಾ ವಿಭಾಗಗಳಿಗೆ ಪ್ರತ್ಯೇಕ ಉಪಪ್ರಾಂಶುಪಾಲರ ಹುದ್ದೆ ಮಂಜೂರು ಮಾಡಿ ಹಾಲಿ ಪ್ರಭಾರರಾಗಿ ಕಾರ್ಯನಿರ್ವಹಿಸುತ್ತಿರುವ ಉಪಪ್ರಾಂಶುಪಾಲರಿಗೆ ಪ್ರಭಾರ ಭತ್ಯೆ ನೀಡಬೇಕು, ಸ್ನಾತಕೋತ್ತರ ಪದವಿ ಪಡೆದ ಪ್ರೌಢಶಾಲಾ ಶಿಕ್ಷಕರಿಗೆ ಪದವಿ ಪೂರ್ವ ಕಾಲೇಜು ಉಪನ್ಯಾಸಕರಾಗಿ ಹಿಂದಿನ ನಿಯಮದ ಅನ್ವಯ ಶೇ.50-50ರ ಅನುಪಾತದಲ್ಲಿ ಯಾವುದೇ ನಿಯಮ,ನಿಬಂಧನೆಗಳಿಗೆ ಒಳಪಡಿಸದೆ ಕೂಡಲೇ ಮುಂಬಡ್ತಿ ನೀಡಬೇಕೆಂದು ಮನವಿ ಮಾಡಿದರು.
ಸೆ.29 ರಂದು ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು. ನವೆಂಬರ್ 2ರಂದು ಫ್ರೀಡಂಪಾರ್ಕ್‍ನಲ್ಲಿ ಒಂದು ದಿನದ ಧರಣಿ ನಡೆಸುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ರಾಮು ಗುಂಗುವಾಡ, ಪ್ರಧಾನಕಾರ್ಯದರ್ಶಿ ಸಿದ್ಧಣ್ಣಪೂಜಾರಿ, ಸಂಘಟನಾ ಕಾರ್ಯದರ್ಶಿ ಲಿಂಗರಾಜು ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ