ಬೆಂಗಳೂರು, ಆ.29- ಬಿಬಿಎಂಪಿ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ಅಳವಡಿಸಿರುವ ಮೊಬೈಲ್ ಟವರ್ಗಳಿಗೆ ಶುಲ್ಕ ವಿಧಿಸುವ ಮೂಲಕ ಸಂಪನ್ಮೂಲ ಕ್ರೋಡಿಕರಣಕ್ಕೆ ಬಿಬಿಎಂಪಿ ಮುಂದಾಗಿದೆ.
ಮೊಬೈಲ್ಗಳ ಸೂಕ್ಷ್ಮ ವಿಕಿರಣಗಳಿಂದ ಮಾನವರ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇವುಗಳಿಂದ ಹಲವು ರೋಗಗಳು ಉಂಟಾಗುತ್ತಿವೆ ಎಂಬ ದೂರುಗಳು ಹಿಂದಿನಿಂದಲೂ ಕೇಳಿಬರುತ್ತಿದ್ದವು. ಇದೀಗ ಬಿಬಿಎಂಪಿ ಮೊಬೈಲ್ ಟವರ್ಗಳಿಗೆ ಶುಲ್ಕ ವಿಧಿಸಿ, ಅವುಗಳ ಮೇಲೆ ನಿಯಂತ್ರಣ ಹೇರಲು ಮುಂದಾಗಿದೆ.
ಹೊಸ ನಿಯಮದಂತೆ, ಮೊಬೈಲ್ ಟವರ್ಗೆ ಬಿಬಿಎಂಪಿಯಿಂದ ಅನುಮತಿ ಪಡೆಯಬೇಕಾಗುತ್ತದೆ. ಅನುಮತಿ ಪಡೆಯುವಾಗ ಎರಡೂವರೆ ಲಕ್ಷ ರೂ. ಪಾವತಿಸಬೇಕು. ಮಾತ್ರವಲ್ಲ ವಾರ್ಷಿಕ 50 ಸಾವಿರ ರೂ. ಶುಲ್ಕ ಪಾವತಿಸಬೇಕಾಗುತ್ತದೆ.
ಈ ತೀರ್ಮಾನಕ್ಕೆ ಖಾಸಗಿ ಮೊಬೈಲ್ ಸಂಸ್ಥೆಗಳು ಈಗಾಗಲೇ ವಿರೋಧ ವ್ಯಕ್ತಪಡಿಸಿವೆ.
ನಗರದಲ್ಲಿ ಒಟ್ಟು 6766 ಮೊಬೈಲ್ ಟವರ್ಗಳಿದ್ದು, ಅವುಗಳಿಂದ ವಾರ್ಷಿಕ ಶುಲ್ಕ ಪಡೆದು ಪಾಲಿಕೆಯ ವರಮಾನವನ್ನು ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ. ಎಟಿಸಿ ಅಮೆರಿಕ ಸಂಸ್ಥೆಯ 1920, ಇಂಡಸ್-2904, ಟವರ್ ಮಿಷನ್-448, ರಿಲಯನ್ಸ್-873, ರಿ ಇನ್ಫ್ರಾ-621 ಸೇರಿ ಒಟ್ಟು 9766 ಟವರ್ಗಳನ್ನು ನಗರದ ವಿವಿಧೆಡೆ ಹಾಕಲಾಗಿದೆ. ಅವುಗಳಲ್ಲಿ ಹೆಚ್ಚಿನವು ಕಟ್ಟಡಗಳ ಮೇಲೆ ಸ್ಥಾಪಿಸಲಾಗಿವೆ.
ಜನವಸತಿ ಪ್ರದೇಶಗಳಲ್ಲೇ ಇಂತಹ ಮೊಬೈಲ್ ಟವರ್ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪಿಸಿರುವುದರಿಂದ ಜನರು ಮತ್ತು ಪಕ್ಷಿ ಸಂಕುಲಕ್ಕೆ ಇದರಿಂದ ತೊಂದರೆಯಾಗುತ್ತಿದೆ ಎಂಬ ಆರೋಪ ಕೂಡ ಕೇಳಿಬಂದ ಹಿನ್ನೆಲೆಯಲ್ಲಿ ಪಾಲಿಕೆ ಇದೀಗ ಅವುಗಳ ಮೇಲೆ ನಿಯಂತ್ರಣ ಸಾಧಿಸುವುದರ ಮೂಲಕ ವರಮಾನ ಹೆಚ್ಚಿಸಲು ಮುಂದಾಗಿದೆ.
ನಿನ್ನೆ ನಡೆದ ಪಾಲಿಕೆ ಸಭೆಯಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪಿಸಿ, ಹೊಸ ನಿರ್ಧಾರಕ್ಕೆ ಅನುಮೋದನೆ ಪಡೆಯಲು ನಿರ್ಧರಿಸಲಾಗಿತ್ತು. ಆದರೆ ವಿರೋಧ ಪಕ್ಷ ಬಿಜೆಪಿ ಸದಸ್ಯರು ಈ ಯೋಜನೆಗೆ ವಿರೋಧ ವ್ಯಕ್ತಪಡಿಸುವ ಮುನ್ಸೂಚನೆ ದೊರೆತ ಹಿನ್ನೆಲೆಯಲ್ಲಿ ಪ್ರಸ್ತಾಪವನ್ನು ಅಲ್ಲಿ ಮಂಡಿಸಿರಲಿಲ್ಲ. ಈಗಾಗಲೇ ಈ ನಿರ್ಣಯಕ್ಕೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅನುಮೋದನೆ ನೀಡಿದೆ. ಸೆಪ್ಟಂಬರ್ 10ರಂದು ನಡೆಯುವ ವಿಷಯಾಧಾರಿತ ಸಭೆಯಲ್ಲಿ ಟವರ್ಗಳಿಗೆ ಶುಲ್ಕ ವಿಧಿಸುವ ಪ್ರಸ್ತಾಪಕ್ಕೆ ಅನುಮೋದನೆ ಪಡೆಯಲು ನಿರ್ಧರಿಸಲಾಗಿದೆ. ಮೇಯರ್ ಅಧಿಕಾರಾವಧಿ ಮುಗಿಯುವುದರೊಳಗೆ ಈ ನಿಯಮ ಜಾರಿಗೆ ಬರುವ ಸಾಧ್ಯತೆ ಇದೆ ಎಂದು ಪಾಲಿಕೆಯ ಉನ್ನತ ಮೂಲಗಳು ತಿಳಿಸಿವೆ.