ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ದುರಪಯೋಗ ಪಡಿಸಿಕೊಳ್ಳಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ವಾರಾಣಸಿಯ ಬಿಜೆಪಿ ಕಾರ್ಯಕರ್ತರು ಹಾಗೂ ಸ್ವಯಂಸೇವಕರನ್ನುದ್ದೇಶಿಸಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣವನ್ನು ಒಳ್ಳೆಯ ವಿಷಯಕ್ಕೆ ಬಳಕೆ ಮಾಡಬೇಕೇ ಹೊರತು ಸುಳ್ಳು ಸುದ್ದಿಯನ್ನು ಹಬ್ಬಿಸಿ, ರಾಡಿ ಎಬ್ಬಿಸುವುದಕ್ಕೆ ಅಲ್ಲ ಎಂದು ಹೇಳಿದ್ದಾರೆ.
125 ಕೋಟಿ ಭಾರತೀಯರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ತಾವು ನಿಯಂತ್ರಿಸಿಕೊಳ್ಳುವುದನ್ನು ಕಲಿಯಬೇಕು, ಸ್ವಚ್ಛತಾ ಯೋಜನೆ ಮಾನಸಿಕ ಸ್ವಚ್ಛತೆಗೂ ಸಂಬಂಧಿಸಿದ್ದಾಗಿರುತ್ತದೆ ಎಂದು ಮೋದಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮನಸೋ ಇಚ್ಚೆ ಸುದ್ದಿ ಹಬ್ಬಿಸುವುದು ಸಭ್ಯ ಸಮಾಜದ ವರ್ತನೆಯಲ್ಲ, ಈ ವಿಷಯ ಯಾವುದೇ ಸಿದ್ಧಾಂತಕ್ಕೆ ಸಂಬಂಧಿಸಿದ್ದಲ್ಲ ಬದಲಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಸಾಧ್ಯವಾದಷ್ಟೂ ಒಳ್ಳೆಯ ಸಂಗತಿಗಳತ್ತ ಗಮನ ಹರಿಸುವುದಕ್ಕೆ ತಮ್ಮನ್ನು ತಾವು ತರಬೇತುಗೊಳಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಯಾವುದೋ ಒಂದು ಸಂಗತಿಯನ್ನು ನೋಡುತ್ತಿದ್ದಂತೆಯೇ, ಕೇಳುತ್ತಿದ್ದಂತೆಯೇ ಜನತೆ ಅದನ್ನು ಫಾರ್ವರ್ಡ್ ಮಾಡುತ್ತಾರೆ. ಆದರೆ ಅದರಿಂದ ಸಮಾಜದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ಯೋಚಿಸಬೇಕು. ಕೆಲವು ಸಭ್ಯ ಸಮಾಜದ ವರ್ತನೆಗೆ ಧಕ್ಕೆ ಉಂಟಾಗಬಲ್ಲ ರೀತಿಯಲ್ಲಿ ಪದಗಳನ್ನು ಮಾಡಲಾಗುತ್ತಿದೆ. ಮಹಿಳೆಯರ ಬಗ್ಗೆ ಅಗೌರರವಾಗಿ ಬರೆಯಲಾಗುತ್ತಿದೆ ಇಂತಹ ಕೆಲಸ ಸರಿಯಲ್ಲ, ಜಾಲತಾಣಗಳನ್ನು ಒಳ್ಳೆಯ ಉದ್ದೇಶಕ್ಕಾಗಿ ಉಪಯೋಗಿಸುವಂತೆ ಬುದ್ಧಿಮಾತು ಹೇಳಿದ್ದಾರೆ.
ಇದೇ ವೇಳೆ ಸಾಮರಸ್ಯದ ವಾತಾವರಣದ ಬಗ್ಗೆಯೂ ಮಾತನಾಡಿರುವ ಮೋದಿ, ಸಕಾರಾತ್ಮಕ ಸುದ್ದಿಗಳಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸಬೇಕಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮೊಹಲ್ಲಾದ ಎರಡು ಕುಟುಂಬಗಳ ಕಲಹ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುವಂತಾಗಿದೆ ಎಂದು ಹೇಳಿದ್ದಾರೆ.
PM Narendra Modi urges people not to spread dirt through social media