ಬೆಂಗಳೂರು, ಆ.28- ರಾಷ್ಟ್ರೀಯ ಹೆದ್ದಾರಿ-206 ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳುವ ಭೂಮಿ, ಮನೆ, ನಿವೇಶನಗಳಿಗೆ ಮಾರುಕಟ್ಟೆ ಬೆಲೆಗಿಂತ ನಾಲ್ಕು ಪಟ್ಟು ಹೆಚ್ಚು ಪರಿಹಾರ ನೀಡಬೇಕೆಂದು ರಾಷ್ಟ್ರೀಯ ಹೆದ್ದಾರಿ ಸಂತ್ರಸ್ತರ ಹೋರಾಟ ಸಮಿತಿ, ರೈತ ಕೃಷಿ ಕಾರ್ಮಿಕರ ಸಂಘಟನೆ, ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಷ್ಟ್ರೀಯ ಹೆದ್ದಾರಿ ಸಂತ್ರಸ್ತರ ಹೋರಾಟ ಸಮಿತಿ ಸಂಚಾಲಕ ಎಸ್.ಎನ್.ಸ್ವಾಮಿ, ರಾಷ್ಟ್ರೀಯ ಹೆದ್ದಾರಿ-206 ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ತುಮಕೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭೂಮಿ, ಮನೆಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಭೂಸ್ವಾಧೀನಕ್ಕಾಗಿ ರೈತರೊಂದಿಗೆ ಮಾತುಕತೆ ನಡೆಸಿಲ್ಲ. ರಸ್ತೆಗಾಗಿ ಸ್ವಾಧೀನಪಡಿಸಿಕೊಳ್ಳುವ ಭೂಮಿ, ಮನೆ, ನಿವೇಶನಗಳಿಗೆ ಏಕಪಕ್ಷೀಯ ಪರಿಹಾರ ನೀಡುವುದಾಗಿ ಸರ್ಕಾರ ತಿಳಿಸಿದೆ ಎಂದರು.
ನಮ್ಮ ಜಮೀನು ನಮ್ಮ ಬೆಲೆ. ಇದು ನಮ್ಮ ಘೋಷಣೆ. ಈ ನಿಟ್ಟಿನಲ್ಲಿ ರೈತ- ಕೃಷಿ ಕಾರ್ಮಿಕ ಸಂಘಟನೆ ಹಾಗೂ ರಾಷ್ಟ್ರೀಯ ಹೆದ್ದಾರಿ-206, ಸಂತ್ರಸ್ತರ ಹೋರಾಟ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಜತೆಗೂಡಿ ಸೆ.3ರಂದು ತಿಪಟೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ-206 ಸಂತ್ರಸ್ತರ ಸಮಾವೇಶವನ್ನು ಸಂಘಟಿಸುತ್ತಿರುವುದಾಗಿ ತಿಳಿಸಿದರು.
ನೋಟಿಫಿಕೇಷನ್ ನೀಡಿದಾಗಿನಿಂದ ಇಲ್ಲಿಯವರೆಗೂ ಕಾಮಗಾರಿ ವಿಳಂಬದಿಂದಾಗಿ ಆದ ನಷ್ಟವನ್ನು ಸಂಪೂರ್ಣವಾಗಿ ಕೊಡಬೇಕು. ಜಮೀನು, ನಿವೇಶನ, ಮನೆಗಳನ್ನು ಕಳೆದುಕೊಂಡವರಿಗೆ ಪರಿಹಾರದ ಜತೆಗೆ ಜಮೀನು ಮತ್ತು ನಿವೇಶನ ನೀಡಬೇಕು. ಮರ, ಗಿಡ, ಬಾವಿ, ಕೊಳವೆ ಬಾವಿ ಸರ್ವೆ ವೇಳೆ ಸಾಕಷ್ಟು ಲೋಪದೋಷಗಳಾಗಿದ್ದು, ಕೂಡಲೇ ಪರಿಶೀಲನೆ ನಡೆಸಬೇಕು. ಸರ್ವೆ ಕಾರ್ಯಕ್ಕೂ ಮುನ್ನ ಪ್ರತಿ ಗ್ರಾಮದಲ್ಲಿಯೂ ಸಭೆ ಕರೆದು ಅವರ ಗೊಂದಲಗಳನ್ನು ನಿವಾರಿಸಬೇಕು. ಸಂತ್ರಸ್ತ ಕುಟುಂಬಗಳಿಗೆ ಅವರವರ ವಿದ್ಯಾಭ್ಯಾಸಕ್ಕೆ ತಕ್ಕಂತೆ ಸರ್ಕಾರಿ ಕೆಲಸ ನೀಡಬೇಕು. ಬೈಪಾಸ್ ನಿರ್ಮಾಣ ಮಾಡುವ ಕಡೆ ಫ್ಲೈ ಓವರ್ ನಿರ್ಮಿಸುವುದನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಿ.ಎಸ್.ದೇವರಾಜ್ (ಆರ್‍ಕೆಎಸ್), ರಾಜ್ಯ ಸಮಿತಿಯ ಸದಸ್ಯ ಪಿ.ಆನಂದ್ ಉಪಸ್ಥಿತರಿದ್ದರು.