ಓಲಾ ಕಂಪೆನಿ ವಿರುದ್ಧ ಅನಿರ್ದಿಷ್ಟಾವಧಿ ಮುಷ್ಕರ

 

ಬೆಂಗಳೂರು, ಆ.28-ಓಲಾ ಟ್ಯಾಕ್ಸಿ ಚಾಲಕರ ಮೇಲೆ ಸುಳ್ಳು ಕೇಸು ದಾಖಲಿಸಿ ಅವರ ಜೀವನಕ್ಕೆ ಭಂಗ ತರುತ್ತಿರುವ ಓಲಾ ಕಂಪೆನಿ ವಿರುದ್ಧ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ರಾಷ್ಟ್ರೀಯ ಚಾಲಕರ ಒಕ್ಕೂಟ ಎಚ್ಚರಿಕೆ ನೀಡಿದೆ.

ಬೆಂಗಳೂರಿನ ಓಲಾ ಕ್ಯಾಬ್ ಆಧಾರಿತ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ನಾಲ್ಕೂವರೆ ಸಾವಿರಕ್ಕೂ ಹೆಚ್ಚು ಚಾಲಕರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿರುವುದಲ್ಲದೆ, ಅವರ ಮೇಲೆ ಅನಗತ್ಯವಾಗಿ ಕ್ರಿಮಿನಲ್ ಮೊಕದ್ದವೆÅ ಹೂಡುತ್ತಿರುವುದು ಖಂಡನಾರ್ಹ. ಇವರ ಈ ಕ್ರಮದಿಂದ ಚಾಲಕರು ಬೀದಿಗೆ ಬೀಳುವಂತಾಗಿದೆ. ಕೂಡಲೇ ಕಪ್ಪು ಪಟ್ಟಿಯಿಂದ ತೆಗೆಯಬೇಕು, ಇಲ್ಲದಿದ್ದರೆ ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಒಕ್ಕೂಟದ ಅಧ್ಯಕ್ಷ ಗಂಡಸಿ ಸದಾನಂದಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಓಲಾ ಕ್ಯಾಬ್ ಆಧಾರಿತ ಸಂಸ್ಥೆಯಲ್ಲಿ 60 ಸಾವಿರಕ್ಕೂ ಹೆಚ್ಚು ಕ್ಯಾಬ್ ಚಾಲಕರು ಪ್ರಯಾಣಿಕರನ್ನು ಸಾಗಿಸುವಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ. ವಾಹನ ಚಾಲಕರ ಮೇಲೆ ಇತ್ತೀಚಿನ ದಿನಗಳಲ್ಲಿ ಕೆಲವು ಪ್ರಯಾಣಿಕರಿಂದ ಬಂದ ದೂರುಗಳನ್ನಾಧರಿಸಿ ಓಲಾ ಕಂಪೆನಿಯವರು ನಾಲ್ಕೂವರೆ ಸಾವಿರಕ್ಕೂ ಹೆಚ್ಚು ವಾಹನ ಚಾಲಕರನ್ನು ಕಪ್ಪು ಪಟ್ಟಿಗೆ ಸೇರಿಸಿದ್ದಾರೆ. ನಿಯಮ ಬಾಹಿರವಾಗಿ ವಾಹನ ಚಾಲಕರಿಗೆ ರೇಟಿಂಗ್ ಸಹ ಕಡಿಮೆ ಮಾಡಿದ್ದಾರೆ. ಕಂಪೆನಿಯವರ ಈ ಅವ್ಯವಸ್ಥೆಯಿಂದ ವಾಹನ ಚಾಲಕರ ಬದುಕು ದುಸ್ತರವಾಗಿದೆ.

ಕಂಪೆನಿಯವರ ವ್ಯವಸ್ಥಿತ ಹುನ್ನಾರದಿಂದ ಚಾಲಕರನ್ನು ಕಪ್ಪು ಪಟ್ಟಿಗೆ ಸೇರಿಸುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು. ಸರ್ಕಾರ ಕಂಪೆನಿಯವರಿಗೆ ನಿಗದಿಪಡಿಸಿದ ಕಿಲೋಮೀಟರ್‍ಗೆ 24 ರೂ. ಚಾಲಕರಿಗೆ ಕಡ್ಡಾಯವಾಗಿ ನೀಡಬೇಕು ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಕೂಡಲೇ ಖಾಸಗಿ ಕ್ಯಾಬ್ ಗಳ ಸೇವೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ