ಬೆಂಗಳೂರು, ಆ.28- ಸಾಲಮನ್ನಾ ವಿಚಾರದಲ್ಲಿ ರಾಜ್ಯ ಸರ್ಕಾರ ಲೇವಾದೇವಿದಾರರ ಮೇಲೆ ಗದಾಪ್ರಹಾರ ಮಾಡಿ ಅವರನ್ನು ಬೀದಿಗೆ ದೂಡಲು ಮುಂದಾಗಿದೆ ಎಂದು ರಾಜ್ಯ ಫೈನಾನ್ಷಿಯರ್ಸ್ ಫೆಡರೇಷನ್ ಆಕ್ರೋಶ ವ್ಯಕ್ತಪಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೆಡರೇಷನ್ ಅಧ್ಯಕ್ಷ ಕೆ.ಜಯರಾಮ ಸೂಡ, ರಾಜ್ಯದ 12 ಸಾವಿರ ಲೇವಾದೇವಿದಾರರು, ಗಿರವಿದಾರರು ಅಧಿಕೃತವಾಗಿ ನೋಂದಣಿ ಮಾಡಿಕೊಂಡು ವ್ಯವಹಾರ ನಡೆಸುತ್ತಿದ್ದೇವೆ. ಆದರೆ, ಯಾವುದೇ ಮುನ್ಸೂಚನೆ ನೀಡದೆ ಸಾಧಕ-ಬಾಧಕಗಳನ್ನು ಅರಿಯದೆ ಈ ರೀತಿ ಕ್ರಮ ಕೈಗೊಂಡಿರುವುದು ಸರಿಯಾದುದಲ್ಲ ಎಂದು ಹೇಳಿದರು.
ಕಷ್ಟದ ಪರಿಸ್ಥಿತಿಯಲ್ಲಿ ನಮ್ಮಲ್ಲಿಗೆ ಬಂದ ರೈತರು ಮತ್ತು ಬಡವರಿಗೆ ನಿಯಮದಂತೆಯೇ ಬಡ್ಡಿ ಆಧಾರದ ಮೇಲೆ ನೀಡಿರುವ ಸಾಲವನ್ನು ಮಾಫಿ ಮಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂಬ ಮಾಹಿತಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಸ್ವತಃ ಕೆಲ ಸಚಿವರುಗಳೇ ಮಾಹಿತಿ ನೀಡುತ್ತಿದ್ದಾರೆ. ಇದು ನಮಗೆ ಆತಂಕ ತಂದಿದೆ ಎಂದು ಹೇಳಿದರು.
ಸುಗ್ರೀವಾಜ್ಞೆ ರಾಷ್ಟ್ರಪತಿಗಳಿಂದ ಅಧಿಕೃತವಾಗಿ ಸಹಿ ಹಾಕುವ ಮುಂಚಿತವಾಗಿ ಲೇವಾದೇವಿದಾರರು ಬಡವರಿಗೆ ನೀಡಿರುವ ಸಾಲವನ್ನು ಮನ್ನಾ ಮಾಡುವ ಕಾಯ್ದೆ ಹಿಂತೆಗೆದುಕೊಳ್ಳಬೇಕು. ನೀಡಿದ ಸಾಲದ ಅಸಲು ನಮಗೆ ನೀಡದೆ ಇದ್ದರೆ ಸರ್ಕಾರದಿಂದ ಪಡೆದ ಅಧಿಕೃತ ಪರವಾನಗಿ ವಾಪಸು ನೀಡಿ ನಾವು ಕಟ್ಟಿದ್ದ 150ಕ್ಕೂ ಹೆಚ್ಚು ಕೋಟಿ ಭದ್ರತಾ ಠೇವಣಿಗಳನ್ನು ಕೂಡಲೇ ನಮಗೆ ವಾಪಸು ನೀಡಬೇಕೆಂದು ಆಗ್ರಹಿಸುತ್ತೇವೆ ಎಂದರು.
ಒಂದು ವೇಳೆ ಈ ಕಾಯ್ದೆಯನ್ನು ಹಿಂತೆಗೆದುಕೊಳ್ಳದಿದ್ದರೆ ಲೇವಾದೇವಿದಾರರು ಬೀದಿಗಿಳಿದು ತೀವ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.