ಬೆಂಗಳೂರು, ಆ.28- ರೈತರ ಸಾಲ ಮನ್ನಾ, ಲೇವಾದೇವಿದಾರರ ಕಿರುಕುಳದಿಂದ ಬಡವರಿಗೆ ಮುಕ್ತಿ ನೀಡುವ ಸುಗ್ರೀವಾಜ್ಞೆ ಜಾರಿ, ಹಸಿರು ಕರ್ನಾಟಕ ಯೋಜನೆ, ವಿದ್ಯಾರ್ಥಿಗಳಿಗೆ ಉಚಿತ ಪ್ರವಾಸ ಭಾಗ್ಯ ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ನೂರು ದಿನಗಳತ್ತ ದಾಪುಗಾಲಿಟ್ಟಿದೆ.
ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಆ.30ರಂದು ಶತದಿನ ಪೂರೈಸಲಿದೆ. ಯಾರೂ ಊಹಿಸಲಾರದ ರೀತಿಯಲ್ಲಿ ರಚನೆಯಾದ ಸಮ್ಮಿಶ್ರ ಸರ್ಕಾರ ರಾಜಕೀಯ ಏಳು-ಬೀಳುಗಳ ನಡುವೆ ಜನಪರ ಯೋಜನೆಗಳೊಂದಿಗೆ ಮುನ್ನುಗ್ಗುತ್ತಿದೆ.
ಪ್ರಬಲ ವಿರೋಧ ಪಕ್ಷವಾದ ಬಿಜೆಪಿಯವರ ಟೀಕಾಪ್ರಹಾರ, ಆಡಳಿತಾರೂಢ ಕಾಂಗ್ರೆಸ್, ಜೆಡಿಎಸ್ ಪಕ್ಷದ ಹಲವು ನಾಯಕರ ಅಸಮಾಧಾನದ ನಡುವೆಯೂ ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದ ರಥವನ್ನು ಮುನ್ನಡೆಸುತ್ತಿದ್ದಾರೆ.
ಎರಡೂ ಪಕ್ಷಗಳ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರತಿಪಕ್ಷಗಳನ್ನವರನ್ನು ಸಮರ್ಥವಾಗಿ ಎದುರಿಸಿ ಆಡಳಿತ ನಡೆಸುವುದು ಅಷ್ಟೇನು ಸುಲಭವಲ್ಲ. ಸಮ್ಮಿಶ್ರ ಸರ್ಕಾರ ನಡೆಸುವುದೇ ಒಂದು ಸವಾಲಾಗಿದೆ. ತಂತಿಯ ಮೇಲಿನ ನಡಿಗೆಯಂತಾಗಿದೆ. ಇದರ ಅರಿವು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗಿದ್ದು, ಅವರು ಪ್ರತಿ ಹೆಜ್ಜೆಗಳನ್ನು ಎಚ್ಚರಿಕೆಯಿಂದ ಇಡುತ್ತಲೇ ಬಂದಿರುವುದರಿಂದ ಸರ್ಕಾರ ಯಶಸ್ವಿಯತ್ತ ಸಾಗುತ್ತಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಾವುದೆ ಪಕ್ಷಕ್ಕೆ ಸ್ಪಷ್ಟ ಬಹುಮತ ಬಾರದ ಹಿನ್ನೆಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಮೇ 23ರಂದು ರಚನೆಯಾಯಿತು. ಅಂದು ವಿಧಾನಸೌಧದ ಮುಂಭಾಗ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿಯಾಗಿ ಡಾ.ಜಿ.ಪರಮೇಶ್ವರ್ ಪ್ರಮಾಣವಚನ ಸ್ವೀಕರಿಸಿದ್ದರು.
ರಾಷ್ಟ್ರೀಯ ನಾಯಕರಾದ ಸೋನಿಯಾಗಾಂಧಿ, ರಾಹುಲ್‍ಗಾಂಧಿ, ಶರದ್‍ಪವಾರ್, ಮಾಯಾವತಿ, ಮಮತಾ ಬ್ಯಾನರ್ಜಿ ಚಂದ್ರಬಾಬುನಾಯ್ಡು, ಎಚ್.ಡಿ.ದೇವೇಗೌಡರು ಸೇರಿದಂತೆ ಹಲವು ನಾಯಕರ ದಂಡೇ ನೆರೆದಿತ್ತು.
ಕಳೆದ ನೂರು ದಿನಗಳಲ್ಲಿ ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ ಮಾಡುವ ಮಹತ್ವದ ಹಾಗೂ ಐತಿಹಾಸಿಕ ತೀರ್ಮಾನವನ್ನು ಕೈಗೊಂಡು ಕಾರ್ಯಗತಗೊಳಿಸುವ ಯತ್ನದಲ್ಲಿದೆ.
ಸಾಲಗಾರರ ಸುಳಿಯಿಂದ ರೈತರು ಹಾಗೂ ಕೃಷಿ ಕಾರ್ಮಿಕರನ್ನು ಮುಕ್ತಗೊಳಿಸಲು ಋಣ ಪರಿಹಾರ ಅಧಿನಿಯಮವನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಮುಂದಾಗಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಹಸಿರು ಕರ್ನಾಟಕ ಯೋಜನೆಗೆ ಚಾಲನೆ ನೀಡಲಾಗಿದೆ.
ರೈತರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಲು ಮಂಡ್ಯ ಜಿಲ್ಲೆಯಲ್ಲಿ ಸ್ವತಃ ಮುಖ್ಯಮಂತ್ರಿಗಳೇ ಗದ್ದೆಗಿಳಿದು ಭತ್ತದ ನಾಟಿ ಮಾಡುವ ಮೂಲಕ ಧೈರ್ಯ ತುಂಬುವ ಕೆಲಸ ಮಾಡಿದರು.
ರಾಜ್ಯ ಸರ್ಕಾರ ರೈತರ ಪರವಾಗಿದ್ದು, ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ರೈತರನ್ನು ಆರ್ಥಿಕವಾಗಿ ಸದೃಢಗೊಳಿಸುವ ಯೋಜನೆಗಳನ್ನು ಕಾರ್ಯಗತಗೊಳಿಸಲಿದೆ ಎಂಬ ಭರವಸೆಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿದ್ದಾರೆ.
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ನಿರಂತರವಾಗಿ ಸಾರ್ವಜನಿಕರನ್ನು ಭೇಟಿ ಮಾಡಿ ಅವರ ಕುಂದುಕೊರತೆಗಳಿಗೆ ಮುಖ್ಯಮಂತ್ರಿ ಸ್ಪಂದಿಸುತ್ತಾ ಬಂದಿದ್ದಾರೆ. ಈ ನಡುವೆ ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅತಿವೃಷ್ಟಿ ಉಂಟಾಗಿ ಸಂಕಷ್ಟಕ್ಕೀಡಾದ ಜನರ ನೆರವಿಗೆ ಸರ್ಕಾರ ತುರ್ತಾಗಿ ಸ್ಪಂದಿಸುವ ಕೆಲಸವನ್ನು ಮಾಡುತ್ತಿದೆ.
ಕೊಡಗು ಸೇರಿದಂತೆ ಮಳೆ ಅನಾಹುತಕ್ಕೀಡಾದ ಪ್ರದೇಶಗಳಲ್ಲಿ ಪುನರ್ವಸತಿ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಸಂಪುಟ ವಿಸ್ತರಣೆ, ನಿಗಮ ಮಂಡಳಿಗೆ ನೇಮಕ ಮಾಡುವಂತೆ ಪದೇ ಪದೇ ಒತ್ತಡ ಕೇಳಿಬರುತ್ತಿದೆ. ಸರ್ಕಾರಿ ನೌಕರರ ಅಧಿಕಾರಿಗಳ ವರ್ಗಾವಣೆ, ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗಕ್ಕೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂಬ ಆರೋಪ-ಪ್ರತ್ಯಾರೋಪಗಳ ನಡುವೆಯೇ ಸಮ್ಮಿಶ್ರ ಸರ್ಕಾರ ಶತ ದಿನ ಪೂರೈಸುವತ್ತ ಹೆಜ್ಜೆ ಹಾಕಿದೆ.
ಕಳೆದ 2-3 ವರ್ಷಗಳಿಂದ ಬರದ ಛಾಯೆಗೆ ಸಿಲುಕಿದ್ದ ರಾಜ್ಯ ಈ ವರ್ಷವೂ ಭಾಗಶಃ ಬರ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ. ಆದರೆ, ರಾಜ್ಯದ ಪ್ರಮುಖ ಜಲಾಶಯಗಳು ಭರ್ತಿಯಾಗಿ ನಿಟ್ಟುಸಿರು ಬಿಡುವಂತಾಗಿದೆ.
ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿದ ಬಜೆಟ್ ಎರಡನ್ನೂ ಅನುಷ್ಠಾನಗೊಳಿಸುವ ಹೊಣೆಗಾರಿಕೆ ರಾಜ್ಯ ಸರ್ಕಾರದ ಮೇಲಿದೆ.
ಒಟ್ಟಾರೆ ಕುಮಾರಸ್ವಾಮಿ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ಸಾಗುತ್ತಿದ್ದು, ರೈತರು ಹಾಗೂ ಜನ ಪರವಾಗಿ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಉದ್ದೇಶವನ್ನು ಹೊಂದಿದೆ.