ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾರತವನ್ನು ಕೇಸರೀಕರಣಗೊಳಿಸಲು ಯತ್ನಿಸುತ್ತಿದ್ದು ಈ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕೆಂದು ಡಿಎಂಕೆ ಮುಖ್ಯಸ್ಥ ಎಂಕೆ ಸ್ಟ್ಯಾಲಿನ್ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪದಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಸ್ಟಾಲಿನ್, ದೇಶದ್ಲಲಿ ಒಂದೇ ಭಾಷೆಯ ಪ್ರಾಬಲ್ಯವಿರಬೇಕೆನ್ನುವ ಪಕ್ಷವನ್ನು ವಿರೋಧಿಸಲೇಬೇಕು ಎಂದು ಹೇಳಿದ್ದಾರೆ.
ಮೋದಿ ಸರ್ಕಾರ ರಾಜ್ಯ ಸರ್ಕಾರಗಳ ಹಕ್ಕನ್ನು ಕಸಿದುಕೊಳ್ಳುತ್ತಿದ್ದು ಭಾರತವನ್ನು ಕೇಸರಿಕರಣಗೊಳಿಸಲು ಯತ್ನಿಸುತ್ತಿದೆ, ಈ ಸರ್ಕಾರಕ್ಕೆ ಪಾಠ ಕಲಿಸಬೇಕಿದೆ, ರಾಜ್ಯದಲ್ಲಿರುವ ಜನವಿರೋಧಿ, ಗಟ್ಟಿ ನಿಲುವು ಹೊಂದದ ಎಐಎಡಿಎಂಕೆ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂದು ಸ್ಟ್ಯಾಲಿನ್ ಹೇಳಿದ್ದಾರೆ.
ಡಿಎಂಕೆ ದೇವರುಗಳ ವಿರೋಧಿಯಲ್ಲ. ಪೆರಿಯಾರ್ ಕಾಲದಲ್ಲಿದ್ದ ವಿಚಾರವಾದಿ ನೀತಿಗಳಿಗೆ ಹಿಂತಿರುಗುವುದಿಲ್ಲ, ಹಾಗೆಂದ ಮಾತ್ರಕ್ಕೆ ಇ.ವಿ ರಾಮಸ್ವಾಮಿ ಪೆರಿಯಾರ್ ನ ನೀತಿಗಳಿಂದ ಹಿಂದೆ ಸರಿಯುವುದೂ ಇಲ್ಲ ಎಂದು ಸ್ಟ್ಯಾಲಿನ್ ತಿಳಿಸಿದ್ದಾರೆ.
ಒಟ್ಟಾರೆ ಸ್ಟಾಲಿನ್, ಲೋಕಸಭಾ ಚುನಾವಣೆಗೆ ಡಿಎಂಕೆ ಹಾಗೂ ಬಿಜೆಪಿ ನಡುವೆ ಮೈತ್ರಿ ನಡೆಯುವ ಸಾಧ್ಯತೆಯಿದೆ ಎಂಬ ಊಹಾಪೋಹವನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.