ಕಬಡ್ಡಿಯಲ್ಲಿ ಬೆಳ್ಳಿ ಗೆದ್ದ ಉಷಾರಾಣಿ ಅವರಿಗೆ 15 ಲಕ್ಷ ಚೆಕ್ ವಿತರಣೆ

ಬೆಂಗಳೂರು: ಇಂಡೋನೇಷಿಯಾದಲ್ಲಿ ನಡೆದ ಏಷಿಯನ್ ಗೇಮ್ಸ್‌‌ನ ಮಹಿಳಾ ಕಬಡ್ಡಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಉಷಾರಾಣಿ ಅವರಿಗೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು 15 ಲಕ್ಷ ರು. ಚೆಕ್ ವಿತರಿಸಿದರು.

ಸದಾಶಿವನಗರ ಬಿಡಿಎ ಕ್ವಾಟ್ರಸ್‌ನಲ್ಲಿ ಮಂಗಳವಾರ ಯುವಜನ ಮತ್ತು ಕ್ರೀಡಾಇಲಾಖೆ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಸನ್ಮಾನಿಸಲಾಯಿತು.
ಬಳಿಕ ಮಾತಾನಾಡಿದ ಅವರು, ಪೊಲೀಸ್ ಇಲಾಖೆಯಲ್ಲಿ ಕಾನ್ಸ್‌ಟೇಬಲ್ ಆಗಿದ್ದ ಉಷಾರಾಣಿ ಅವರು ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆಲುವು ಸಾಧಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಇವರ ಸಾಧನೆಗೆ ಕ್ರೀಡಾ ಇಲಾಖೆಯಿಂದ 15 ಲಕ್ಷ ರು. ಚೆಕ್ ನೀಡಲಾಗಿದೆ.

ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಪದಕ ಗೆದ್ದವರಿಗೆ ಪೊಲೀಸ್ ಇಲಾಖೆಯಲ್ಲಿ ಹುದ್ದೆ‌ ನೀಡುವ ನಿಯಮಾವಳಿಯನ್ನು ಸಡಿಲಗೊಳಿಸಲಾಗುತ್ತಿದ್ದು, ಉಷಾರಾಣಿ ಅವರಿಗೆ ಪೊಲೀಸ್ ಇಲಾಖೆಯಲ್ಲಿ ಬಿ ದರ್ಜೆ ಹುದ್ದೆ ನೀಡಲಾಗುವುದು ಎಂದು ಭರವಸೆ‌ ನೀಡಿದರು.
ಮುಂದಿನ‌ ದಿನಗಳಲ್ಲಿ ಚಿನ್ನ ಗೆಲ್ಲುವಂತಾಗಲಿ ಎಂದು ಆಶಿಸಿದರು.

ಇದೇ ಕ್ರೀಡಾಕೂಟದಲ್ಲಿ ಟೆನ್ನಿಸ್‌ ಡಬಲ್ಸ್‌ನಲ್ಲಿ ಚಿನ್ನ ಗೆದ್ದಿರುವ
ರೋಹನ್ ಬೋಪಣ್ಣ ಹಾಗೂ ಫೌದ್ ಮಿರ್ಜಾ ಅವರಿಗೂ ಶೀಘ್ರವೇ ಸನ್ಮಾನಿಸಲಾಗುವುದು ಎಂದರು.

ಈ ವೇಳೆ ಸರಕಾರದ ಅಪರ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್, ಡಿಜಿ ನೀಲಮಣಿ ರಾಜು, ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ