ಮುಖ್ಯಮಂತ್ರಿ ಒಂದು ಲಕ್ಷ ಮನೆ ನಿರ್ಮಾಣ ಯೋಜನೆ ಮುಂದಿನ ಮೂರು ತಿಂಗಳ ಒಳಗಾಗಿ ಆರಂಭಗೊಳ್ಳಲಿದೆ: ಸಚಿವ ಯು.ಟಿ.ಖಾದರ್

 

ಬೆಂಗಳೂರು, ಆ.27- ಮುಖ್ಯಮಂತ್ರಿ ಒಂದು ಲಕ್ಷ ಮನೆ ನಿರ್ಮಾಣ ಯೋಜನೆ ಮುಂದಿನ ಮೂರು ತಿಂಗಳ ಒಳಗಾಗಿ ಆರಂಭಗೊಳ್ಳಲಿದೆ ಎಂದು ವಸತಿ ಸಚಿವ ಯು.ಟಿ.ಖಾದರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಬೆಂಗಳೂರು ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಒಂದು ಲಕ್ಷ ಮನೆ ನಿರ್ಮಿಸಿಕೊಡುವ ಯೋಜನೆ ಜಾರಿಯಾಗಿದೆ. ಪ್ರತಿ ಮನೆಗೆ ಆರು ಲಕ್ಷ ವೆಚ್ಚವಾಗಲಿದ್ದು, ಸರ್ಕಾರ 2.70ಲಕ್ಷ ಭರಿಸಲಿದೆ. ಉಳಿದ ಹಣವನ್ನು ಬ್ಯಾಂಕ್ ಮೂಲಕ ಸಾಲದ ರೂಪದಲ್ಲಿ ಕೊಡಿಸಲಾಗುವುದು ಎಂದರು.

ಯೋಜನೆಯ ಕರಡು ಈಗಾಗಲೇ ಸಿದ್ಧಗೊಂಡಿದ್ದು, ಟೆಂಡರ್ ಪ್ರಕ್ರಿಯೆ ಹಾಗೂ ಇತರೆ ಕೆಲಸಗಳು ನಡೆಯುತ್ತಿವೆ. ಮುಂದಿನ ಮೂರು ತಿಂಗಳಲ್ಲಿ ಎಲ್ಲಾ ಕೆಲಸಗಳು ಪೂರ್ಣಗೊಂಡು ಮನೆ ನಿರ್ಮಾಣ ಕೆಲಸ ಆರಂಭಗೊಳ್ಳಲಿದೆ. ಇದಕ್ಕಾಗಿ ಬೆಂಗಳೂರಿನಾದ್ಯಂತ 257 ಎಕರೆ ಭೂಮಿಯನ್ನು ಗುರುತಿಸಲಾಗಿದೆ ಎಂದು ಖಾದರ್ ಹೇಳಿದರು.

ಯೋಜನೆಗಾಗಿ ಈಗಾಗಲೇ 49ಸಾವಿರ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಎರಡನೇ ಹಂತದಲ್ಲಿ 51ಸಾವಿರ ಫಲಾನುಭವಿಗಳ ಆಯ್ಕೆಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗುವುದು ಎಂದು ಹೇಳಿದರು.
ವಸತಿ ಇಲಾಖೆಗೆ ಸಂಬಂಧಪಟ್ಟ ವಿಚಾರಣೆಗಳಿಗಾಗಿ ಸ್ಪಂದನಾ ಕಾಲ್ ಸೆಂಟರನ್ನು ಆರಂಭಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರು ವಸತಿ ಯೋಜನೆಗೆ ಅರ್ಜಿ ಹಾಕಿರುವ ಮಾಹಿತಿ, ಮಂಜೂರಾತಿ, ಅನುದಾನ ಬಿಡುಗಡೆ ಸೇರಿದಂತೆ ರಾಜೀವ್‍ಗಾಂಧಿ ವಸತಿ ನಿಗಮದ ಸಮಗ್ರ ವಿವರಣೆ ಪಡೆದುಕೊಳ್ಳಬಹುದು. 080-23118888ಗೆ ಕರೆ ಮಾಡಿ ಕಾಲ್‍ಸೆಂಟರ್‍ನಿಂದ ಮಾಹಿತಿ ಪಡೆದುಕೊಳ್ಳಲು ಅವಕಾಶವಿದೆ. ಸೆ.10ರಂದು ಇದನ್ನು ಉದ್ಘಾಟಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಕೊಡಗಿನಲ್ಲಿ 750 ಮನೆ ನಿರ್ಮಾಣ:
ಭಾರೀ ಮಳೆಯಿಂದಾಗಿ ಕೊಡಗಿನಲ್ಲಿ ಸಾಕಷ್ಟು ಹಾನಿಯಾಗಿದ್ದು, ಪ್ರಾಥಮಿಕ ವರದಿ ಆಧರಿಸಿ ಜಿಲ್ಲೆಯಲ್ಲಿ 750 ಮನೆ ನಿರ್ಮಿಸಿಕೊಡಲು ಚರ್ಚೆ ನಡೆದಿದೆ ಎಂದರು.
ಇದಕ್ಕಾಗಿ ಕೊಡಗಿನಾದ್ಯಂತ 42 ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಮನೆಗಳನ್ನು ಯಾವ ಸ್ವರೂಪದಲ್ಲಿ ನಿರ್ಮಿಸಬೇಕು ಎಂಬ ಕುರಿತು ಮೂರು ಪ್ರಸ್ತಾವನೆಗಳನ್ನು ಸಿದ್ದಪಡಿಸಲಾಗಿದೆ. ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿದ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ತಾತ್ಕಾಲಿಕ ಶೆಡ್‍ಗಳ ನಿರ್ಮಾಣ, ಶಾಶ್ವತ ಮನೆಗಳ ನಿರ್ಮಾಣದಂತಹ ಪ್ರಸ್ತಾವನೆಗಳಿವೆ. ಶ್ರೀಮಂತರಿರಲಿ, ಬಡವರಿರಲಿ ವಸತಿ ಇಲಾಖೆಯಿಂದ ಎಲ್ಲರಿಗೂ ಏಕ ರೂಪದಲ್ಲಿ ಮನೆ ನಿರ್ಮಿಸಿಕೊಡಲಾಗುವುದು. ಎರಡನೇ ಹಂತದಲ್ಲಿ ಇನ್ನುಷ್ಟು ಮನೆಗಳನ್ನು ನಿರ್ಮಿಸಿಕೊಡಲು ಇಲಾಖೆ ಸಿದ್ಧವಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ