ಬೆಂಗಳೂರು, ಆ.27- ಸಮ್ಮಿಶ್ರ ಸರ್ಕಾರದ ಗೊಂದಲಗಳ ನಡುವೆಯೇ ರಾಜ್ಯ ರಾಜಕೀಯದ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ರಾಹುಲ್ ಗಾಂಧಿ ಸೆ.15ರ ನಂತರ ರಾಜ್ಯ ಕಾಂಗ್ರೆಸ್ ನಾಯಕರ ಸಭೆ ಕರೆದಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಹಿರಿಯ ಸಚಿವರಾದ ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪ್ರಮುಖ ನಾಯಕರ ಜೊತೆ ಸಭೆ ನಡೆಸಲು ರಾಹುಲ್ ಗಾಂಧಿ ಮುಂದಾಗಿದ್ದಾರೆ.
ಸೆ.3ರಿಂದ 15ರವರೆಗೆ ಸಿದ್ದರಾಮಯ್ಯನವರು ವಿದೇಶ ಪ್ರವಾಸ ಕೈಗೊಳ್ಳಲಿದ್ದು, ಅವರು ವಾಪಸ್ಸಾದ ನಂತರ ಸಭೆ ನಡೆಸುವ ಸಾಧ್ಯತೆ ಇದೆ.
ಸಭೆಯಲ್ಲಿ ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ, ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕಾತಿ, ಸಮನ್ವಯ ಸಮಿತಿಯ ನಡವಳಿಕೆಗಳ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ಈ ಬಾರಿ ಜೆಡಿಎಸ್ -ಕಾಂಗ್ರೆಸ್ ನಡುವೆ ಚುನಾವಣಾ ಪೂರ್ವಮೈತ್ರಿ ಏರ್ಪಡಲಿದೆ ಎಂದು ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ತಿಳಿಸಿದೆ.
ಆದರೆ ಕ್ಷೇತ್ರಗಳ ಹಂಚಿಕೆ ವಿಷಯವಾಗಿ ಅಧಿಕೃತವಾಗಿ ಇದುವರೆಗೂ ಯಾವುದೇ ಚರ್ಚೆ ನಡೆದಿಲ್ಲ. ಜೆಡಿಎಸ್ ಹಳೇ ಮೈಸೂರು ಭಾಗದಲ್ಲಿ 7, ಉತ್ತರ ಕರ್ನಾಟಕ ಭಾಗದಲ್ಲಿ 2 ಸೇರಿ ಒಟ್ಟು 9 ಕ್ಷೇತ್ರಗಳನ್ನು ಬಿಟ್ಟು ಕೊಡುವಂತೆ ಬೇಡಿಕೆ ಇಟ್ಟಿದೆ.
ಕಾಂಗ್ರೆಸ್ ಸಂಸದರು ಇದಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್‍ಗೆ ನೆಲೆಯಿಲ್ಲ. ಹಳೇ ಮೈಸೂರು ಭಾಗದಲ್ಲಿ ಎರಡು ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿದೆ. ಈಗ 9 ಕ್ಷೇತ್ರಗಳನ್ನು ಬಿಟ್ಟುಕೊಟ್ಟರೆ ನಿರಾಯಾಸವಾಗಿ ಕಾಂಗ್ರೆಸ್‍ನ ವೋಟ್ ಬ್ಯಾಂಕ್‍ನ ಕ್ಷೇತ್ರಗಳನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟಂತಾಗುತ್ತದೆ.
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆಯಾಗುವಾಗ ಇದ್ದಂತ ಈ ಎರಡೂ ಪಕ್ಷಗಳಲ್ಲಿ ಇದ್ದ ಸೌಹಾರ್ದಯುತ ವಾತಾವರಣ ಈಗಿಲ್ಲ. ರಾಜಕಾರಣ ಸಾಕಷ್ಟು ಬದಲಾಗಿದೆ. ಮೈತ್ರಿ ಮಾಡಿಕೊಳ್ಳುವ ಅನಿವಾರ್ಯ ಪರಿಸ್ಥಿತಿಯೇನು ಇಲ್ಲ. ಒಂದು ವೇಳೆ ಮೈತ್ರಿ ಬೇಕೇ ಬೇಕು ಎಂಬುದಾದರೆ ಜೆಡಿಎಸ್‍ಗೆ 3ರಿಂದ 4 ಸ್ಥಾನ ಬಿಟ್ಟುಕೊಟ್ಟರೆ ಸಾಕು ಎಂದು ಕಾಂಗ್ರೆಸ್ ನಾಯಕರು ವಾದಿಸುತ್ತಿದ್ದು, ಹೈಕಮಾಂಡ್‍ನ ಗಮನಕ್ಕೂ ಈ ವಿಷಯವನ್ನು ತಂದಿದ್ದಾರೆ.
ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕುರಿತಂತೆ ಗೊಂದಲು ಏರ್ಪಟ್ಟಿದೆ. ಮೈತ್ರಿಯ ಗೊಂದಲ ಬಗೆಹರಿಯದ ಹೊರತು ಅಭ್ಯರ್ಥಿಗಳ ಆಯ್ಕೆಯಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ರಾಜ್ಯ ನಾಯಕರ ಜೊತೆ ಮಹತ್ವದ ಸಭೆ ನಡೆಸಲು ಮುಂದಾಗಿದ್ದಾರೆ.
ಕರ್ನಾಟಕ ಕಾಂಗ್ರೆಸ್‍ನ ಉಸ್ತುವಾರಿ ನಾಯಕರಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ .ವೇಣುಗೋಪಾಲ್ ಅವರು ಸದ್ಯಕ್ಕೆ ತಮ್ಮ ತವರು ರಾಜ್ಯ ಕೇರಳದಲ್ಲಿ ಮಳೆಯಿಂದಾಗಿರುವ ಅನಾಹುತಗಳ ಪರಿಹಾರ ಕಾರ್ಯದಲ್ಲಿ ತೊಡಗಿದ್ದು, ಸಿದ್ದರಾಮಯ್ಯ ಕೂಡ ವಿದೇಶ ಪ್ರವಾಸ ಹೊರಟಿದ್ದು, ಇವರಿಬ್ಬರು ಬಿಡುವಾದ ನಂತರ ಸಭೆ ನಡೆಯಲಿದೆ.
ಆವರೆಗೂ ಸಚಿವ ಸಂಪುಟ ವಿಸ್ತರಣೆ ನೆನೆಗುದಿಗೆ ಬೀಳಲಿದ್ದು, ನಿಗಮ ಮಂಡಳಿಗಳ ನೇಮಕಾತಿ ನಡೆಯುವುದು ಅನುಮಾನವಿದೆ. ದೆಹಲಿಯಲ್ಲಿ ಸಭೆ ನಡೆದ ನಂತರ ಸಚಿವ ಸಂಪುಟ ವಿಸ್ತರಣೆ, ಮತ್ತು ನಿಗಮ ಮಂಡಳಿ ನೇಮಕಾತಿ ಬಗ್ಗೆ ನಿರ್ಧಾರವಾಗುವ ಸಾಧ್ಯತೆ ಇದೆ.