ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏಕಾಂಗಿ ಅಲ್ಲಃ ಎಚ್.ಎಂ. ರೇವಣ್ಣ

 

ಬೆಂಗಳೂರು, ಆ.26- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಕಾಂಗಿಯಲ್ಲ. ಅವರು ಕಾಂಗ್ರೆಸ್‍ನ ಪ್ರಬಲ ನಾಯಕರು. ಹೈಕಮಾಂಡ್‍ನ ಬೆಂಬಲವೂ ಅವರಿಗಿದೆ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಹೇಳಿದರು.
ಇಂದು ಬೆಳಗ್ಗೆ ಸದಾಶಿವನಗರದಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಬದಲಾಗುತ್ತದೆ. ಮುಖ್ಯಮಂತ್ರಿಯೂ ಬದಲಾಗುತ್ತಾರೆ ಎಂಬ ವದಂತಿ ಸತ್ಯಕ್ಕೆ ದೂರವಾದದ್ದು ಎಂದರು.

ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಹುಲ್‍ಗಾಂಧಿ ಅವರು ನಿರ್ಧಾರ ತೆಗೆದುಕೊಂಡಂತೆ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ. ಐದು ವರ್ಷ ಕಾಲ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುತ್ತಾರೆ. 15 ದಿನಗಳ ಒಳಗಾಗಿ ಸರ್ಕಾರ ಪತನವಾಗುತ್ತದೆ. ಬಿಜೆಪಿ ಸರ್ಕಾರ ರಚನೆಯಾಗುತ್ತದೆ ಎಂಬೆಲ್ಲಾ ಹೇಳಿಕೆಗಳು ಅವಾಸ್ತವಿಕ. ತಾಂತ್ರಿಕವಾಗಿ ಇನ್ನು ಮೂರೂವರೆ ತಿಂಗಳು ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶವಿಲ್ಲ. ಹಾಗಿದ್ದರೂ 15 ದಿನದಲ್ಲಿ ಸರ್ಕಾರ ಪತನವಾಗುತ್ತದೆ ಎಂಬ ಹೇಳಿಕೆಗಳು ಹಾಸ್ಯಾಸ್ಪದ ಎಂದು ಹೇಳಿದರು.

ಸಮ್ಮಿಶ್ರ ಸರ್ಕಾರ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಯಾವುದೇ ತೊಂದರೆಗಳಿಲ್ಲ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ಅವರು, ಅವಕಾಶ ಸಿಕ್ಕರೆ ಮತ್ತೆ ಮುಖ್ಯಮಂತ್ರಿಯಾಗುತ್ತೇನೆ ಎಂದಿದ್ದಾರೆ. ಆ ಕಾರ್ಯಕ್ರಮದಲ್ಲಿ ಅಭಿಮಾನಿಗಳು, ಕಾರ್ಯಕರ್ತರು, ಸಮಾಜದ ಮುಖಂಡರು ಸಿದ್ದರಾಮಯ್ಯ ಅವರಿಗೆ ಹಿಂದುಳಿದ ವರ್ಗದ ಸಮಾಜಕ್ಕೂ ಸರ್ಕಾರಿ ಗುತ್ತಿಗೆಯಲ್ಲಿ ಮೀಸಲಾತಿ ಜಾರಿ ಮಾಡುವಂತೆ ಒತ್ತಾಯಿಸಿದರು. ಆಗ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ ನೀಡಿದ್ದೆ. ಹಲವಾರು ಒಳ್ಳೆಯ ಕೆಲಸ ಮಾಡಿದ್ದೆ. ಮತ್ತೆ ಅಧಿಕಾರಕ್ಕೆ ಬಂದರೆ ಇನ್ನಷ್ಟು ಕೆಲಸ ಮಾಡುವ ವಿಶ್ವಾಸವಿತ್ತು. ಆದರೆ, ಜನ ಅವಕಾಶ ನೀಡಲಿಲ್ಲ. ಮತ್ತೆ ಅವಕಾಶ ಸಿಕ್ಕರೆ ಮುಖ್ಯಮಂತ್ರಿಯಾಗುತ್ತೇನೆ. ಎಲ್ಲಾ ಕೆಲಸಗಳನ್ನು ಮುಂದುವರೆಸುತ್ತೇನೆ ಎಂದಿದ್ದಾರೆ. ಸಮುದಾಯದ ಜನರ ಒತ್ತಾಯಕ್ಕೆ ಅವರು ಈ ರೀತಿ ಹೇಳಿಕೆ ನೀಡಿರುವ ಸಾಧ್ಯತೆ ಇದೆ. ಅದರಲ್ಲಿ ಯಾವುದೇ ತಪ್ಪುಗಳು ಇಲ್ಲ ಎಂದರು.

ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ. ಗ್ರಾಪಂ ಸದಸ್ಯನಿಂದ ಸಂಸದರವರೆಗೂ ಎಲ್ಲರೂ ಅಧಿಕಾರಕ್ಕಾಗಿ ಆಸೆ ಪಡುತ್ತಾರೆ. ಈ ದೇಶದಲ್ಲಿ ಸೋನಿಯಾಗಾಂಧಿ ಅವರು ಮಾತ್ರ ಪ್ರಧಾನಿ ಹುದ್ದೆಯನ್ನು ನಿರಾಕರಿಸಿದ ರಾಜಕಾರಣಿ. ಉಳಿದೆಲ್ಲರೂ ಅಧಿಕಾರ ಬಯಸುವುದು ಸಾಮಾನ್ಯ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರು ಏಕಾಂಗಿಯಲ್ಲ. ಕಾಂಗ್ರೆಸ್‍ನಂತಹ ದೊಡ್ಡ ಪಕ್ಷದಲ್ಲಿ ಪ್ರಭಾವಿ ನಾಯಕರು. ಹೈಕಮಾಂಡ್‍ನ ಬೆಂಬಲ ಅವರಿಗಿದೆ. ಸಮನ್ವಯ ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ರೇವಣ್ಣ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ