ಸುಗ್ರೀವಾಜ್ಞೆ ಮೂಲಕ ಅನಧಿಕೃತ ಲೇವಾದೇವಿ ಮಟ್ಟ

 

ಬೆಂಗಳೂರು, ಆ.26- ಲೇವಾದೇವಿ ಕಾಯ್ದೆಯನ್ನು ಸಚಿವ ಸಂಪುಟದಲ್ಲಿ ಏಕಾಏಕಿ ಮಂಡನೆ ಮಾಡಿಲ್ಲ. ಜೆಡಿಎಸ್-ಕಾಂಗ್ರೆಸ್ ಪಕ್ಷಗಳ ನಡುವೆ ಸುದೀರ್ಘ ಚರ್ಚೆಯ ನಂತರವೇ ಕಾಯ್ದೆ ಮಂಡನೆಯಾಗಿದೆ. ಸುಗ್ರೀವಾಜ್ಞೆ ಮೂಲಕ ಅನಧಿಕೃತ ಲೇವಾದೇವಿಯನ್ನು ಮಟ್ಟಹಾಕಲಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೇವಾದೇವಿ ಕಾಯ್ದೆ ಈಗಾಗಲೇ ಜಾರಿಯಲ್ಲಿತ್ತು. ಅದಕ್ಕೆ ತಿದ್ದುಪಡಿ ಮಾಡಿ ಇನ್ನಷ್ಟು ಸದೃಢಗೊಳಿಸಲಾಗಿದೆ. ಗ್ರಾಮೀಣ ಭಾಗದಿಂದ ಸಾಕಷ್ಟು ದೂರುಗಳು ಬಂದಿದ್ದವು. ಬಡ್ಡಿ, ಚಕ್ರಬಡ್ಡಿ, ಸುಸ್ತಿಬಡ್ಡಿ ವಸೂಲಿ ಮಾಡಿ ಜನರನ್ನು ಘೋಷಣೆ ಮಾಡಲಾಗುತಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದಿಂದ ಮುಖ್ಯಮಂತ್ರಿಯವರು ಸಮಗ್ರ ವರದಿ ಪಡೆದುಕೊಂಡಿದ್ದಾರೆ. ಖಾಸಗಿ ಲೇವಾದೇವಿ ಯಾವ ರೀತಿ ನಡೆಯುತ್ತಿದೆ ಎಂಬ ಮಾಹಿತಿ ಪಡೆಯಲಾಗಿದೆ ಎಂದರು.

ಆರ್‍ಬಿಐನಿಂದ ಅನುಮತಿ ಪಡೆದು ನಿಯಮಾನುಸಾರ ನಡೆಯುತ್ತಿರುವ ಲೇವಾದೇವಿಗಳಿಗೆ ಯಾವುದೇ ತೊಂದರೆ ಮಾಡುವುದಿಲ್ಲ. ನಿಯಮ ಬಾಹಿರವಾಗಿ ನಡೆಯುತ್ತಿರುವ ಲೇವಾದೇವಿಗಳನ್ನು ಮಟ್ಟ ಹಾಕಬೇಕಿದೆ. ಹಾಗಾಗಿ ಸಂಪುಟದಲ್ಲಿ ಮಸೂದೆ ಮಂಡಿಸುವುದನ್ನು ಗುಟ್ಟಾಗಿ ಇಡಲಾಗಿತ್ತು. ಏಕಾಏಕಿ ಮಂಡನೆಯಾಗಿಲ್ಲ. ಈ ಬಗ್ಗೆ ಸಮಗ್ರ ಚರ್ಚೆ ನಡೆದಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಪರಮೇಶ್ವರ್, ಎಲ್ಲರೂ ವಿವರಣೆ ನೀಡಿದ್ದಾರೆ. ಅಡ್ವೋಕೇಟ್ ಜನರಲ್ ಕೂಡ ಸಾಧಕ-ಬಾಧಕಗಳನ್ನು ತಿಳಿಸಿದ್ದಾರೆ. ರಾಜ್ಯ ಸರ್ಕಾರ ಸುಗ್ರೀವಾಜ್ಞೆ ರೂಪಿಸಿ ಕೇಂದ್ರ ಸರ್ಕಾಕ್ಕೆ ಶಿಫಾರಸು ಕಳುಹಿಸಲಿದೆ ಎಂದು ಹೇಳಿದರು.

ಸಾರ್ವಜನಿಕರಲ್ಲಿ ಖಾಸಗಿ ಲೇವಾದೇವಿದಾರರ ಜತೆ ವ್ಯವಹಾರ ಮಾಡದಂತೆ ಜಾಗೃತಿ ಮೂಡಿಸಬೇಕಿದೆ. ರಾಷ್ಟ್ರೀಕೃತ ಬ್ಯಾಂಕುಗಳು ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕುತ್ತಿರುವ ಬಗ್ಗೆ ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಲೇವಾದೇವಿ ಕಾಯ್ದೆಯನ್ನು ಜಾರಿಗೊಳಿಸುವ ಅಧಿಕಾರ ತಹಸೀಲ್ದಾರ್ ಮತ್ತು ಉಪ ವಿಭಾಗಾಧಿಕಾರಿಗಳಿಗೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅದನ್ನು ಸಮರ್ಥವಾಗಿ ಜಾರಿಗೊಳಿಸುತ್ತೇವೆ ಎಂದು ಹೇಳಿದರು.

ವರ್ತಕರು, ವ್ಯಾಪಾರಿಗಳು, ಕೈಗಾರಿಕೋದ್ಯಮಿಗಳು, ಶ್ರೀಮಂತರು ಪಡೆದ ಸಾವಿರಾರು ಕೋಟಿ ರೂ. ಸಾಲಗಳನ್ನು ಒನ್‍ಟೈಮ್ ಸೆಟಲ್‍ಮೆಂಟ್ ಮೂಲಕ ಮನ್ನಾ ಮಾಡಿದೆ. ರೈತರ ಸಾಲವನ್ನು ಮನ್ನಾ ಮಾಡಲು ಹಿಂದೇಟು ಹಾಕುತ್ತಿರುವುದು ಏಕೆ ? ರಾಜ್ಯ ಸರ್ಕಾರ 39ಸಾವಿರ ಕೋಟಿ ರೂ. ನಾಲ್ಕು ವರ್ಷಗಳಲ್ಲಿ ಪಾವತಿಸುವುದಾಗಿ ಭರವಸೆ ನೀಡಿದೆ. ರಾಷ್ಟ್ರೀಕೃತ ಬ್ಯಾಂಕುಗಳು ಒಪ್ಪಲಿ, ಬಿಡಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ರೈತರಿಗೆ ನೆರವು ನೀಡುವ ಬದ್ಧತೆ ಬದಲಾಗುವುದಿಲ್ಲ. ರೈತರನ್ನು ಋಣಮುಕ್ತರನ್ನಾಗಿ ಮಾಡೇ ಮಾಡುತ್ತೇವೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ