ಡಿಆರ್​ಡಿಒ ಅಧ್ಯಕ್ಷರಾಗಿ ಸತೀಶ್​ ರೆಡ್ಡಿ ನೇಮಕ

ನವದೆಹಲಿ: ಅಂತರಿಕ್ಷಯಾನ ವಿಜ್ಞಾನಿ ಜಿ. ಸತೀಶ್​ ರೆಡ್ಡಿ ಅವರನ್ನು ಭಾರತದ ರಕ್ಷಣಾ ಸಂಶೋಧನೆ ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ಅಧ್ಯಕ್ಷರನ್ನಾಗಿ ಹಾಗೂ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಇಲಾಖೆ (ಡಿಡಿಆರ್&ಡಿ)ಯ ಕಾರ್ಯದರ್ಶಿಯನ್ನಾಗಿ ಶನಿವಾರ ನೇಮಕ ಮಾಡಲಾಗಿದೆ.

ಸಂಪುಟದ ನೇಮಕಾತಿ ಸಮಿತಿಯು ​ರೆಡ್ಡಿ ಅವರ ನೇಮಕಾತಿಗೆ ಅನುಮೋದನೆ ನೀಡಿದ್ದು, ಅಧಿಕಾರ ಸ್ವೀಕರಿಸಿದಾಗಿನಿಂದ ಎರಡು ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿದ್ದಾರೆ.

ಸದ್ಯ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಅವರ ವಿಜ್ಞಾನ ಸಲಹೆಗಾರರಾಗಿರುವ ರೆಡ್ಡಿ ಅವರು, ಕ್ಷಿಪಣಿ ಅಭಿವೃದ್ಧಿ, ಅಂತರಿಕ್ಷಯಾನ ತಂತ್ರಜ್ಞಾನ ಸಂಶೋಧನೆಯ ಮೂಲಕ ಸಾಕಷ್ಟು ಕೊಡುಗೆ ನೀಡಿದ್ದಾರೆ.

ಜಿ.ಸತೀಶ್​ ರೆಡ್ಡಿ ಆಂಧ್ರಪ್ರದೇಶದ ಜವಹರಲಾಲ್​ ನೆಹರೂ ಟೆಕ್ನಲಾಜಿಕಲ್​ ಯೂನಿವರ್ಸಿಟಿಯಲ್ಲಿ ಎಲೆಕ್ಟ್ರಾನಿಕ್ಸ್​ ಅಂಡ್​ ಕಮ್ಯುನಿಕೇಶನ್​ ಎಂಜಿನಿಯರಿಂಗ್​ನಲ್ಲಿ ಪದವಿ ಪಡೆದಿದ್ದರು. ಲಂಡನ್​ನ ರಾಯಲ್​ ಇನ್ಸ್​ಟಿಟ್ಯೂಟ್​ ಆಫ್​ ನ್ಯಾವಿಗೇಷನ್​ನಲ್ಲಿ, ಯುಕೆಯ ರಾಯಲ್​ ಏರೋನಾಟಿಕಲ್​ ಸೊಸೈಟಿಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ವಿದ್ಯಾಭ್ಯಾಸ ಮಾಡಿದ್ದರು. ರಷ್ಯಾದ ಅಕಾಡೆಮಿ ಆಫ್ ನ್ಯಾವಿಗೇಷನ್​ ಅಂಡ್​ ಮೋಷನ್​ ಕಂಟ್ರೋಲ್​ನಲ್ಲಿ ವಿದೇಶಿ ಸದಸ್ಯರಾಗಿದ್ದರು. ಕಂಪ್ಯೂಟರ್​ ಸೊಸೈಟಿ ಆಫ್​ ಇಂಡಿಯಾ, ಇಂಡಿಯನ್​ ನ್ಯಾಷನಲ್​ ಆಫ್​ ಎಂಜಿನಿಯರಿಂಗ್​, ಏರೋನಾಟಿಕ್​ ಸೊಸೈಟಿ ಆಫ್​ ಇಂಡಿಯಾ, ಯುಕೆಯ ಇನ್ಸ್​ಟಿಟ್ಯೂಟ್​ ಆಫ್​ ಎಂಜಿನಿಯರಿಂಗ್​ ಅಂಡ್​ ಟೆಕ್ನಾಲಜಿಯಲ್ಲಿ ಸಂಶೋಧನಾರ್ಥಿಯಾಗಿದ್ದರು.  ಭಾರತದ ಹಾಗೂ ವಿದೇಶಗಳಲ್ಲಿ ಪ್ರೊಫೆಸರ್​ ಆಗಿ, ವಿಜ್ಞಾನಿಯಾಗಿ  ಸೇವೆ ಸಲ್ಲಿಸಿದ್ದಾರೆ.

ಇಂಡಿಯನ್​ ಸೈನ್ಸ್​ ಕಾಂಗ್ರೆಸ್​ ಅಸೋಸಿಯೇಷನ್​ ನೀಡುವ ಪ್ರತಿಷ್ಠಿತ ಹೋಮಿ ಜಹಂಗೀರ್​ ಬಾಬಾ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ. ಇವರು ಯುಕೆಯ ರಾಯಲ್​ ಏರೋನಾಟಿಕ್​ ಸೊಸೈಟಿಯಿಂದ ಬೆಳ್ಳಿ ಪದಕ ಪಡೆದ ಮೊದಲ ಭಾರತದ ವಿಜ್ಞಾನಿಯಾಗಿದ್ದಾರೆ. ಭಾರತದ ಐಇಐ ಹಾಗೂ ಅಮೆರಿಕಾದ ಐಇಇಇಯ ಜಂಟಿ ಪ್ರಶಸ್ತಿಗೆ ಭಾಜನರಾದ ಮೊದಲಿಗರಾಗಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ