ಬೆಂಗಳೂರು, ಆ.26-ಸರ್ಕಾರಿ ವಲಯದಲ್ಲಿ ದೃಷ್ಟಿಚೇತನರು ಹಾಗೂ ವಿಕಲಚೇತನರಿಗೆ ಮೀಸಲಾತಿ ಇರುವಂತೆ ಖಾಸಗಿ ವಲಯದಲ್ಲಿ ಅಧಿನಿಯಮದ ಅನುಸಾರ ಉದ್ಯೋಗ ನೀಡಲು ನಿರಾಕರಣೆ ಮಾಡುವಂತಿಲ್ಲ. ಅರ್ಜಿ ಹಾಕಿದವರ ಸಂದರ್ಶನ ಮಾಡಿ ನಂತರ ಅರ್ಹತೆ ಮೇಲೆ ನಿರ್ಧಾರ ಕೈಗೊಳ್ಳಬೇಕೇ ಹೊರತು ಏಕಾಏಕಿ ತಿರಸ್ಕøರಿಸುವಂತಿಲ್ಲ ಎಂಬ ನಿಯಮವಿದೆ ಎಂದು ಅಂಗವಿಕಲ ಅಧಿನಿಯಮದ ರಾಜ್ಯ ಆಯುಕ್ತ ವಿ.ಎಸ್.ಬಸವರಾಜ್ ಹೇಳಿದರು.
ನಗರದ ಸಚಿವಾಲಯದ ಕ್ಲಬ್ ಆವರಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ವಿಶೇಷ ಸಾಧನೆಗೈದ ಅಂಧ ಸರ್ಕಾರಿ ನೌಕರರಿಗೆ ಸನ್ಮಾನ ಹಾಗೂ ವೆಬ್‍ಸೈಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಖಾಸಗಿ ವಲಯಗಳಲ್ಲಿ ನಿಯಮಾನುಸಾರ ವಿಕಲಚೇತನರು ಹಾಗೂ ದೃಷ್ಟಿಚೇತನರಿಗೆ ಉದ್ಯೋಗ ಕಲ್ಪಿಸಬೇಕಾಗುತ್ತದೆ ಎಂದರು.
ಖಾಸಗಿ ವಲಯಗಳಲ್ಲಿ ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತಿದ್ದು, ಈ ನಿಟ್ಟಿನಲ್ಲಿ ವಿಕಲಚೇತನರು ಹಾಗೂ ದೃಷ್ಟಿಚೇತನರಿಗೆ ಹೆಚ್ಚು ಉದ್ಯೋಗಕಲ್ಪಿಸಲು ಪ್ರಸ್ತುತ ಇರುವ ಕಾಯ್ದೆಯ ನಿಯಮಾವಳಿಗಳನ್ನು ಮತ್ತಷ್ಟು ಬಲಪಡಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ರಾಜ್ಯಸರ್ಕಾರ ಚಿಂತನೆ ನಡೆಸಿದೆ ಎಂದು ವಿವರಿಸಿದರು.
ಅಧಿನಿಯಮದ 21, 22ನೇ ಸೆಕ್ಷನ್ ಪ್ರಕಾರ ಖಾಸಗಿ ವಲಯದಲ್ಲಿ ಉದ್ಯೋಗಕ್ಕಾಗಿ ಅರ್ಜಿ ಹಾಕಿದ ವಿಕಲಚೇತರಿಗೆ ಸಂದರ್ಶನ ಮಾಡಿದ ನಂತರವೇ ನಿರ್ಧಾರ ಕೈಗೊಳ್ಳಬೇಕಿದೆ.
ವಿಕಲಚೇತನರು, ಅದರಲ್ಲೂ ದೃಷ್ಟಿ ಚೇತನರು ಅಸಾಧಾರಣ ಸಾಮಥ್ರ್ಯ ಹೊಂದಿದ್ದಾರೆ. ಯಾವುದೇ ಕೆಲಸವಾದರೂ ಸಮರ್ಥವಾಗಿ ಮಾಡಬಲ್ಲ ಸಾಮಥ್ರ್ಯ ಅವರಲ್ಲಿದೆ. ಅದಕ್ಕೆ ಸೂಕ್ತ ಅವಕಾಶಗಳು ಸಿಗಬೇಕು. ಸರ್ಕಾರ ದೃಷ್ಟಿಚೇತನರಿಗೆ ಅವಕಾಶಗಳನ್ನು ಕೊಟ್ಟು ಸೂಕ್ತ ತರಬೇತಿ ನೀಡಿದರೆ ಸಾಮಾನ್ಯ ಸಿಬ್ಬಂದಿಯಷ್ಟೆ ಸಮರ್ಥವಾಗಿ ದೃಷ್ಟಿಚೇತನರೂ ಕೂಡ ಕೆಲಸ ಮಾಡಬಲ್ಲರು. ಅವರಲ್ಲಿ ಆ ಸಾಮಥ್ರ್ಯವಿರುವುದನ್ನು ನಾನು ಗಮನಿಸಿದ್ದೇನೆ ಎಂದು ಹೇಳಿದರು.
ದೃಷ್ಟಿ ಚೇತನರು ಎಂದಾಕ್ಷಣ ಸಮಾಜ ಅವರನ್ನು ಉದಾಸೀನದಿಂದ ನೋಡುತ್ತದೆ. ಅವರಿಂದ ಹೆಚ್ಚು ಕೆಲಸ ತೆಗೆಯಲಾಗುವುದಿಲ್ಲ ಎಂಬ ಮನೋಭಾವ ಇದೆ. ಈಗಾಗಲೇ ಕೆಲಸ ಮಾಡುತ್ತಿರುವ ದೃಷ್ಟಿಚೇತನ ನೌಕರರು ತಮ್ಮ ಸಾಮಥ್ರ್ಯ ವನ್ನು ಸಾಬೀತುಪಡಿಸಿದ್ದಾರೆ. ಆಧುನಿಕ ತಂತ್ರಜ್ಞಾನದಲ್ಲಿ ತಮ್ಮ ಕೆಲಸವನ್ನು ಗುರುತಿಸುವ, ಅದನ್ನು ಸರಳೀಕರಣ ಮಾಡಿಕೊಳ್ಳುವ ಬಹಳಷ್ಟು ತಂತ್ರಜ್ಞಾನಗಳಿವೆ. ಅವುಗಳನ್ನು ಬಳಸಿಕೊಂಡು ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಮಾಡುವ ಮೂಲಕ ಸರ್ಕಾರದ ಮುಖ್ಯಸ್ಥರಲ್ಲಿ ದೃಷ್ಟಿಚೇತನರ ಬಗ್ಗೆ ಇರುವ ಉದಾಸೀನ ಮನೋಭಾವವನ್ನು ತೊಡೆದು ಹಾಕಬೇಕಿದೆ ಎಂದು ಹೇಳಿದರು.
ದೃಷ್ಟಿ ಚೇತನರು ಎಂದಾಕ್ಷಣ ಅವರನ್ನು ನಿಭಾಯಿಸಲು ಹೆಚ್ಚು ಖರ್ಚು ಬರುತ್ತದೆ ಎಂಬ ಮನೋಭಾವವಿದೆ. ಆದಷ್ಟು ಸ್ವಾವಲಂಬಿಯಾಗಿ ಬದುಕಲು ದೃಷ್ಟಿಚೇತನರು ಪ್ರಯತ್ನಿಸಬೇಕು. ಸರ್ಕಾರ ದೃಷ್ಟಿಚೇತನರಿಗಾಗಿ ರಿಯಾಯಿತಿ ಪಾಸ್‍ಗಳನ್ನು ನೀಡುತ್ತಿದೆ. ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಉಪನ್ಯಾಸಕ ಡಾ.ನಾಗಶೆಟ್ಟಿ, ಸಹಾಯಕ ಪ್ರಾಧ್ಯಾಪಕ ಡಾ.ಬಸಯ್ಯ ಮಠಪತಿ, ಬೆಳಗಾವಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎಂ.ಎನ್.ಪ್ರಶಾಂತ್, ಮಂಡ್ಯದ ನಿವೃತ್ತ ಪ್ರಾಧ್ಯಾಪಕ ಅರುಣ್‍ಕುಮಾರ್, ಹುಬ್ಬಳ್ಳಿಯ ನಿವೃತ್ತ ಶಿಕ್ಷಕ ಸುರೇಶ್ ಎಂ.ಜೋರಾಪುರಿ ಅವರನ್ನು ಸನ್ಮಾನಿಸಲಾಯಿತು.
ರಾಜ್ಯ ಅಂಧ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಕರೆಡ್ಡಿ, ಇ-ಆಡಳಿತ ಕೇಂದ್ರದ ಯೋಜನಾ ನಿರ್ದೇಶಕ ಪ್ರಭಾಕರ, ಸರ್ಕಾರ ಸಚಿವಾಲಯ ಸಂಘದ ಅಧ್ಯಕ್ಷ ಜಿ.ಎಸ್.ನಾಗರಾಜ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಾಂತರಾಮು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಜಯಲಕ್ಷ್ಮಿ, ಮುಖಂಡರಾದ ರಮೇಶ್‍ಗಣೇಶ್ ಸಂಗ, ನಿತ್ಯಾನಂದ, ಅರುಣ್‍ಕುಮಾರ್ ಮತ್ತಿತರರು ಭಾಗವಹಿಸಿದ್ದರು.