ನವದೆಹಲಿ: ಕೇರಳ, ಕೊಡಗು ಜನಜೀವನವನ್ನು ಬೀದಿಗೆ ತಂದ ವರುಣ ಈಗ ಉತ್ತರ ಭಾರತದತ್ತ ಮುಖ ಮಾಡಿದಂತಿದೆ. ಗಂಗಾ ನದಿಯು ಅಪಾಯದ ಮಟ್ಟವನ್ನು ಮೀರುತ್ತಿದ್ದು, ಹರಿದ್ವಾರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಹರಿದ್ವಾರದಲ್ಲಿರುವ ಗಂಗಾ ನದಿ ನೀರಿನ ಮಟ್ಟ 293.25 ಮೀಟರ್ಗಳಿಗೆ ಏರಿದ್ದು, ಅಪಾಯದ ಮಟ್ಟ 293 ಮೀಟರ್ ಎನ್ನಲಾಗಿದೆ. ಗಂಗಾ ನದಿ ಪಾತ್ರದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ವರ್ಗಾಯಿಸುವ ಕಾರ್ಯ ನಡೆಯುತ್ತಿದೆ. ಭಾರಿ ಮಳೆಗೆ ಉತ್ತರಾಖಂಡ್ನ ಹಲವು ಭಾಗಗಳು ಜಲಾವೃತಗೊಂಡಿವೆ. ಹರಿದ್ವಾರ ಹಾಗೂ ಋಷಿಕೇಶಗಳಲ್ಲಿಯೂ ಭಾರಿ ಮಳೆಯಾಗುತ್ತಿದ್ದು, ಭೂಕುಸಿತ ಉಂಟಾಗಿದೆ. ಯಾತ್ರಿಗಳು, ಪ್ರವಾಸಿಗರು ಹಾಗೂ ಸ್ಥಳೀಯರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ವರುಣನ ಆರ್ಭಟ ಮುಂದುವರೆದಿದ್ದು ಮಲನ, ಶಿಖ್ರೊ, ಖೋ ಹಾಗೂ ಕೊಲ್ಹು ನದಿಗಳು ಮೈದುಂಬಿ ಹರಿಯುತ್ತಿವೆ. ಮಳೆಯ ಪ್ರಮಾಣ ಹೀಗೆ ಮುಂದುವರೆದರೆ ಇಲ್ಲಿನ ಪರಿಸ್ಥಿತಿ ಬಿಗಡಾಯಿಸಲಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.