ಹೊಸದಿಲ್ಲಿ : ನಗರದಲ್ಲಿನ ಸುಪ್ರಸಿದ್ಧ ಐತಿಹಾಸಿಕ ರಾಮ ಲೀಲಾ ಮೈದಾನಕ್ಕೆ ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಇಡುವ ಪ್ರಸ್ತಾಪವನ್ನು ಉತ್ತರ ದಿಲ್ಲಿ ಮುನಿಸಿಪಲ್ ಕಾರ್ಪೊರೇಶನ್ ಮುಂದಿಟ್ಟಿದೆ.
ವಾಜಪೇಯಿ ಅವರು ಕಳೆದ ಆ.16ರಂದು ತಮ್ಮ 93ರ ಹರೆಯದಲ್ಲಿ ನಿಧನ ಹೊಂದಿದ್ದರು. ಅವರ ನಿಧನಕ್ಕೆ ಅಪಾರ ಸಂಖ್ಯೆಯ ದೇಶ-ವಿದೇಶಗಳ ನಾಯಕರು ಶೋಕ ಸಂದೇಶಗಳನ್ನು ಕಳುಹಿಸಿದ್ದಾರೆ.
ಭಾರತದ ಅತ್ಯಪೂರ್ವ ರಾಜಕೀಯ ಮುತ್ಸದ್ದಿ, ಶಾಂತಿ ದೂತ ಎಂದೇ ಖ್ಯಾತಿವೆತ್ತಿರುವ ವಾಜಪೇಯಿ ಅವರ ಸ್ಮರಣಾರ್ಥ ದಿಲ್ಲಿಯ ಪ್ರಸಿದ್ಧ ರಾಮ ಲೀಲಾ ಮೈದಾನಕ್ಕೆ ಅವರ ಹೆಸರನ್ನು ಇಡುವ ಮೂಲಕ ಅಗಲಿದ ಮಹಾನ್ ನಾಯಕನಿಗೆ ಸೂಕ್ತ ರೀತಿಯಲ್ಲಿ ಗೌರವಾರ್ಪಣೆ ಮಾಡಬಹುದಾಗಿದೆ ಎಂದು ಉತ್ತರ ದಿಲ್ಲಿ ಮುನಿಸಿಪಲ್ ಕಾರ್ಪೊರೇಶನ್ ಹೇಳಿದೆ.
ದಿಲ್ಲಿಯ ರಾಮ ಲೀಲಾ ಮೈದಾನವು ವಾರ್ಷಿಕ ರಾಮ ಲೀಲಾ ಉತ್ಸವಕ್ಕೆ ದೇಶ ವಿದೇಶಗಳಲ್ಲಿ ಪ್ರಸಿದ್ಧವಾಗಿದ್ದು ಇದು ಅನೇಕಾನೇಕ ರಾಜಕೀಯ ರಾಲಿಗಳಿಗೆ, ಸಭೆ, ಸಮಾರಂಭ, ಉತ್ಸವ ಮತ್ತು ಮನೋರಂಜನೆಯ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದೆ. ವಾಜಪೇಯಿ ಅವರು ಇಲ್ಲಿಗೆ ಭೇಟಿಕೊಟ್ಟಾಗಲೆಲ್ಲ ಜನಸಾಗರವೇ ಇಲ್ಲಿ ನೆರೆಯುತ್ತಿದ್ದುದು ಈಗ ಇತಿಹಾಸವಾಗಿದೆ.