ಬೆಂಗಳೂರು, ಆ.25-ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಕೊಡಗಿನಲ್ಲಿ ಆಗಿರುವ ಭೀಕರ ಅನಾಹುತಗಳಿಗೆ ಸ್ಪಂದಿಸುವ ಸಲುವಾಗಿ ಕರ್ನಾಟಕ ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ತಮ್ಮ ಒಂದು ದಿನದ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದಾರೆ.
ಕಳೆದ 19 ರಂದು ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ಕೆ.ಕೃಷ್ಣಪ್ಪ, ಗೌರವಾಧ್ಯಕ್ಷರಾದ ಜಿ.ಚಂದ್ರಶೇಖರ್, ಲಾಲ್ಯನಾಯಕ್, ಆರ್.ವೆಂಕಟೇಶ್‍ಮೂರ್ತಿ, ಕೆ.ಕೃಷ್ಣಮೂರ್ತಿ, ಉಷಾರಾಣಿ, ಅಲ್ಲಾಬಕ್ಷ್, ವೆಂಕಟರಮಣಪ್ಪ, ಕುಮಾರಸ್ವಾಮಿ ಮುಂತಾದವರು ಚರ್ಚಿಸಿ ಈ ತೀರ್ಮಾನ ಕೈಗೊಂಡಿದ್ದಾರೆ.
ರಾಜ್ಯದಲ್ಲಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು, 24 ಸಾವಿರ ಹಾಗೂ 1842 ಪದವೀಧರೇತರ ಮುಖ್ಯೋಪಾಧ್ಯಾಯರು ಸೇರಿದಂತೆ ಒಟ್ಟು 25,842 ಮುಖ್ಯ ಶಿಕ್ಷಕರು ಒಂದು ದಿನದ ವೇತನವನ್ನು ಪರಿಹಾರ ನಿಧಿಗೆ ನೀಡುತ್ತಿದ್ದಾರೆ.