ರಾಜ್ಯದ ಕರಾವಳಿ, ಮಲೆನಾಡು ಭಾಗದಲ್ಲಿ ಭಾರೀ ಮಳೆ ಎಚ್ಚರಿಕೆ

 

ಬೆಂಗಳೂರು, ಆ.25- ಮುಂದಿನ ಎರಡು ದಿನಗಳ ನಂತರ ರಾಜ್ಯದ ಕರಾವಳಿ, ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬಂಗಾಳಕೊಲ್ಲಿಯಲ್ಲಿ ದಟ್ಟ ಮೋಡಗಳು ಆವರಿಸುತ್ತಿದ್ದು, ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇರುವುದರಿಂದ 27ರಿಂದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಎಚ್ಚರಿಕೆ ನೀಡಿದೆ.
ಕಳೆದ ವಾರ ರಾಜ್ಯದಲ್ಲಿ ಸುರಿದ ಭಾರೀ ಮಳೆಗೆ ಕೊಡಗು ಜಿಲ್ಲೆಯಲ್ಲಿ ಪ್ರವಾಹ, ಗುಡ್ಡ ಕುಸಿತ ಉಂಟಾಗಿ ಆಸ್ತಿ-ಪಾಸ್ತಿ, ಸಾವು-ನೋವು ಸಂಭವಿಸಿ ಪರಿಹಾರ ಕಾರ್ಯಗಳು ಇಂದಿಗೂ ಮುಂದುವರಿದಿವೆ.

ದಕ್ಷಿಣ ಕನ್ನಡ, ಮಲೆನಾಡು, ಕರಾವಳಿ ಭಾಗದಲ್ಲೂ ಕೂಡ ಮಳೆ ಅನಾಹುತ ಸಂಭವಿಸಿತ್ತು. ರಸ್ತೆ, ಸೇತುವೆಗಳು ಹಾನಿಯಾಗಿದ್ದವು. ಈಗ ಮತ್ತೆ ಮಳೆ ಬಂದರೆ ಮತ್ತಷ್ಟು ಸಮಸ್ಯೆಗಳು ಉಲ್ಬಣವಾಗುವ ಸಾಧ್ಯತೆ ಇದೆ. ಕಳೆದ ಮೂರು ದಿನಗಳಿಂದ ಕೊಂಚ ಬಿಡುವು ನೀಡಿದ್ದ ಮಳೆ ಶುಕ್ರವಾರ ರಾಜ್ಯದ ಹಲವು ಭಾಗಗಳಲ್ಲಿ ಸುರಿಯಿತು.
ಬೆಂಗಳೂರು, ಕರಾವಳಿ ಘಟ್ಟ ಪ್ರದೇಶ ಸೇರಿದಂತೆ ಹಲವೆಡೆ ಮಳೆಯಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿಯುವ ಸಾಧ್ಯತೆ ಇರುವುದರಿಂದ ಎರಡು-ಮೂರು ದಿನಗಳಲ್ಲಿ ರಾಜ್ಯದ ಹಲವೆಡೆ ಸಾಧಾರಣ ಮಳೆ. ಕರಾವಳಿ, ಮಲೆನಾಡು ಭಾಗಗಳಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ನೈಸರ್ಗಿಕ ವಿಕೋಪ ಕೇಂದ್ರ ಎಚ್ಚರಿಕೆ ನೀಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ