ಹೊಸದಿಲ್ಲಿ : 231 ಜೀವಗಳನ್ನು ಬಲಿಪಡೆದಿರುವ, ಭೀಕರ ಪ್ರವಾಹ, ಭೂಕುಸಿತದಿಂದ ತತ್ತರಿಸಿ ಈಗ ನಿಧಾನವಾಗಿ ಸಹಜತೆಯತ್ತ ಮರಳುತ್ತಿರುವ ಕೇರಳದ ಜನರಿಗೆ ಓಣಂ ಹಬ್ಬದ ಶುಭಾಶಯ ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಅವರು, “ಓಣಂ ಹಬ್ಬದ ಸ್ಫೂರ್ತಿ ಕೇರಳದ ಜನರಲ್ಲಿ ಹೊಸ ಶಕ್ತಿ ಚೈತನ್ಯವನ್ನು ತುಂಬಿ ಎಲ್ಲ ಪ್ರತಿಕೂಲತೆಗಳನ್ನು ಸಮರ್ಥವಾಗಿ ಎದುರಿಸುವ ಮೂಲಕ ಹೊಸ ಬಾಳನ್ನು ಕಟ್ಟುವ ಧೈರ್ಯ, ಸ್ಥೈರ್ಯ ನೀಡಲಿ’ ಎಂದು ಹೇಳಿದ್ದಾರೆ.
ಕೇರಳದ ಜನರ ಈ ಕಷ್ಟಕಾಲದಲ್ಲಿ ಇಡಿಯ ದೇಶವೇ ಅವರೊಂದಿಗೆ ಇದೆ; ಅವರ ಸುಖ, ಸಂತೋಷ, ಸಮೃದ್ಧಿಗೆ ದೇಶದ ಜನರು ಒಂದಾಗಿ ಪ್ರಾರ್ಥಿಸುತ್ತಾರೆ ಎಂದು ಪ್ರಧಾನಿ ಮೋದಿ ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.
ಕಳೆದ ಆಗಸ್ಟ್ 8ರಿಂದ ನಿರಂತರ ಜಡಿ ಮಳೆ ಕಂಡು ವ್ಯಾಪಕ ಭೂಕುಸಿತ ಮತ್ತು ಪ್ರವಾಹಕ್ಕೆ 231 ಜನರನ್ನು ಬಲಿ ಪಡೆದ ಈ ಶತಮಾನದ ಅತ್ಯಂತ ಘೋರ ನೈಸರ್ಗಿಕ ಪ್ರಕೋಪವನ್ನು ತಾಳಿಕೊಂಡು ಹೊಸ ಬದುಕನ್ನು ರೂಪಿಸಿಕೊಳ್ಳುವ ಶಕ್ತಿ, ಚೈತನ್ಯವನ್ನು ಕೇರಳದ ಜನರಿಗೆ ದೇವರು ಕರಣಿಸಲೆಂದು ಪ್ರಧಾನಿ ಮೋದಿ ಹಾರೈಸಿದ್ದಾರೆ.