
ಬೆಂಗಳೂರು, ಆ.25- ಮುಖ್ಯಮಂತ್ರಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಸೆ.2 ರಂದು ಬೃಹತ್ ಉದ್ಯೋಗ ಮೇಳವನ್ನು ಹೆಬ್ಬಾಳದ ಏಟ್ರಿಯಾ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಸಿ.ಮುನಿಕೃಷ್ಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೇಳವನ್ನು ವಿದ್ಯಾವಂತ ಯುವಕ-ಯುವತಿಯರು ಹಾಗೂ ನಿರುದ್ಯೋಗಿಗಳ ಸದುಪಯೋಗಕ್ಕೆ ಆಯೋಜಿಸಲಾಗಿದ್ದು, ಇದರಲ್ಲಿ ಪ್ರತಿಷ್ಠಿತ ಕಂಪೆನಿಗಳಾದ ಕೋಟಕ್ ಬ್ಯಾಂಕ್, ಅಪೆÇಲೋ ಪವರ್ ಸಿಸ್ಟಮ್ಸ್, ಸಮಸ್ತ ಫೈನಾನ್ಷಿಯಲ್ ಏರ್‍ಟೆಕ್ಸ್ ಸೇರಿದಂತೆ ಹಲವಾರು ಪ್ರಮುಖ ಕಂಪೆನಿಗಳು ಭಾಗವಹಿಸಲಿದ್ದು, ಸುಮಾರು ಮೂರು ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಲಭ್ಯವಾಗಲಿವೆ ಎಂದು ತಿಳಿಸಿದರು.
ಪಿಯುಸಿ, ತಾಂತ್ರಿಕ ಮತ್ತು ತಾಂತ್ರಿಕೇತರ ಪದವೀಧರರು ಹಾಗೂ ನಿರುದ್ಯೋಗಿಗಳು ಭಾಗವಹಿಸಬಹುದಾಗಿದೆ. ಈ ಮೇಳವನ್ನು ಡಿಸಿಪಿ ಆನಂದ್‍ಕುಮಾರ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಸಿ.ಮುನಿಕೃಷ್ಣ ವಹಿಸುವರು. ಮುಖ್ಯ ಅತಿಥಿಗಳಾಗಿ ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಮಲ್ಯಾದ್ರಿರೆಡ್ಡಿ, ಉದ್ಯಮಿ ಜಯಪ್ರಕಾಶ್ ಅಂಬರ್‍ಕರ್, ಜನರಲ್ ಮ್ಯಾನೇಜರ್ ಎಸ್.ಸಂತೋಷ್‍ರಾವ್ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.