ನವದೆಹಲಿ:ಆ-25: ರಫೆಲ್ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ಕೇಂದ್ರ ಸರ್ಕಾರ ಹಲವು ನಿಯಮಗಳನ್ನು ಉಲ್ಲಂಘಿಸಿದೆ. ರಕ್ಷಣಾ ಸ್ವಾಧೀನ ಪ್ರಕ್ರಿಯೆಯನ್ನು ನಿರ್ಲಕ್ಷಿಸಿದೆ ಎಂದು ಮಾಜಿ ಸಚಿವ ಪಿ ಚಿದಂಬರಂ ಆರೋಪಿಸಿದ್ದಾರೆ.
ಒಪ್ಪಂದ ಮಾಡಿಕೊಳ್ಳುವ ಸಂದರ್ಭದಲ್ಲಿ ಸರ್ಕಾರ ಭದ್ರತಾ ಸಂಪುಟ ಸಮಿತಿಯನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಚಿದಂಬರಂ ಆರೋಪಿಸಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಫೆಲ್ ಒಪ್ಪಂದದಲ್ಲಿ ರಕ್ಷಣಾ ಸ್ವಾಧೀನ ಪ್ರಕ್ರಿಯೆಯನ್ನು ಏಕೆ ತಿರಸ್ಕರಿಸಲಾಯಿತು ಮತ್ತು ಒಪ್ಪಂದ ಸಮಾಲೋಚನಾ ಸಮಿತಿ ಮತ್ತು ಬೆಲೆ ಸಮಾಲೋಚನಾ ಸಮಿತಿಯನ್ನು ಏಕೆ ಇದರಿಂದ ದೂರವಿಡಲಾಗಿದೆ. ಭದ್ರತೆಗೆ ಸಂಬಂಧಪಟ್ಟ ಸಂಪುಟ ಸಮಿತಿಯನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.
ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿ ಮತ್ತು ಇಂದಿನ ಎನ್ ಡಿಎ ಸರ್ಕಾರದಲ್ಲಿ ಪ್ರತಿ ವಿಮಾನದ ಖರೀದಿ ಬೆಲೆಯಲ್ಲಿ ಬಹಳ ವ್ಯತ್ಯಾಸವಿದೆ. ಯುಪಿಎ ಅವಧಿಯಲ್ಲಿ ಪ್ರತಿ ವಿಮಾನದ ಗುತ್ತಿಗೆ ಬೆಲೆ 526 ಕೋಟಿ ರೂಪಾಯಿಗಳಾಗಿದ್ದವು. ಎನ್ ಡಿಎ ಗುತ್ತಿಗೆ ಬೆಲೆ ಪ್ರತಿ ವಿಮಾನಕ್ಕೆ 1,670 ಕೋಟಿ ರೂಪಾಯಿ ಎಂದು ಹೇಳುತ್ತಿದೆ. ಈ ಮೊತ್ತ ಸರಿಯಾಗಿದ್ದರೆ ಈಗ ವಿಮಾನದ ಬೆಲೆ ಮೂರು ಪಟ್ಟು ಅಧಿಕ ಏಕೆ ಆಗಿದೆ ಎಂದು ಪ್ರಶ್ನಿಸಿದ್ದಾರೆ.