ಬೆಂಗಳೂರು, ಆ.24- ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ನಗರದ ವಿವಿಧ ದೇವಾಲಯಗಳಲ್ಲಿ ದೇವಿ ಮಹಾಲಕ್ಷ್ಮಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಲಕ್ಷ್ಮಿ ದೇವಾಲಯಗಳಲ್ಲದೆ ಬೇರೆ ದೇವಾಲಯಗಳಲ್ಲೂ ಲಕ್ಷ್ಮಿ ಪೂಜೆ ಮಾಡಲಾಯಿತು. ಮಹಾಲಕ್ಷ್ಮಿಗೆ ವಿಶೇಷ ಅಲಂಕಾರ ಮಾಡಿ ಬಗೆಬಗೆಯ ಹೂವು, ಆಭರಣಗಳನ್ನು ತೊಡಿಸಿ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿ ಮಹಾಮಂಗಳಾರತಿ, ನೈವೇದ್ಯ ಮಾಡಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಶ್ರಾವಣ ಮಾಸದ ಆರಂಭದಲ್ಲಿ ಬರುವ ವರಮಹಾಲಕ್ಷ್ಮಿಯನ್ನು ಮನೆ ಮನೆಗಳಲ್ಲಿ ಪ್ರತಿಷ್ಠಾಪಿಸಿ ಆರಾಧಿಸುವುದು ವಾಡಿಕೆ.
ಕೆಲವು ದೇವಾಲಯಗಳಲ್ಲಿ ಮಹಾಲಕ್ಷ್ಮಿಗೆ ಕುಂಕುಮಾರ್ಚನೆಯನ್ನು ಮುತ್ತೈದೆಯರಿಂದ ಮಾಡಿಸಲಾಯಿತು.
ನಗರದೆಲ್ಲೆಡೆ ಮಹಿಳೆಯರು ಬೆಳಗಿನ ಜಾವ ಎದ್ದು ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿ ಬಿಡಿಸಿ ಹೂಗಳಿಂದ ಅಲಂಕರಿಸಿದ್ದುದು ಕಂಡುಬಂದಿತು.
ಬಾಗಿಲಿಗೆ ಮಾವಿನ ಸೊಪ್ಪಿನ ತೋರಣ ಕಟ್ಟಿ ಮನೆಯ ಹಾಲ್‍ನಲ್ಲಿ ವಿಶೇಷ ಪೀಠ ಸಿದ್ಧಪಡಿಸಿ ವರಮಹಾಲಕ್ಷ್ಮಿಯನ್ನು ಕಳಶ ಸಹಿತ ಪ್ರತಿಷ್ಠಾಪಿಸಿ ವ್ರತವನ್ನು ಶ್ರದ್ಧೆ-ಭಕ್ತಿಯಿಂದ ನೆರವೇರಿಸಲಾಯಿತು.
ಮಹಿಳೆಯರು ಪೂಜಾ ನಂತರ ಬಲಗೈಗೆ ಕಂಕಣದ ದಾರವನ್ನು ಕಟ್ಟಿಸಿಕೊಂಡು ಹಿರಿಯರಿಂದ ಆಶೀರ್ವಾದ ಪಡೆದರು.
ಬಹಳಷ್ಟು ಮನೆಗಳಲ್ಲಿ ಪುರೋಹಿತರು ಆಗಮಿಸಿ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿಕೊಟ್ಟರು. ಸಂಜೆ ಹೆಂಗಳೆಯರು ಅಲಂಕಾರ ಮಾಡಿಕೊಂಡು ಮನೆಗಳಿಗೆ ತೆರಳಿ ಶುಭಾಶಯ ವಿನಿಮಯ ಮಾಡಿಕೊಂಡು ತಮ್ಮ ಮನೆಗೆ ಆಹ್ವಾನಿಸಿ ಅರಿಶಿನ-ಕುಂಕುಮ, ತಾಂಬೂಲ ನೀಡಿ ಆಶೀರ್ವಾದ ಪಡೆದರು.