ರಕ್ಷಣಾ ಸಚಿವರ ಎದುರೇ ಕೆಜಿ ಬೋಪಯ್ಯ, ಕಾಫಿ ಪ್ಲಾಂಟರ್ ನಡುವೆ ಮಾತಿನ ಚಕಮಕಿ!

ಮಡಿಕೇರಿ: ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಎದುರೇ ಶಾಸಕ, ಮಾಜಿ ಸ್ಪೀಕರ್ ಕೆಜಿ ಬೋಪಯ್ಯ ಹಾಗೂ ಕಾಫಿ ಪ್ಲಾಂಟರ್ ಒಬ್ಬರ ಜೊತೆ ಹಟ್ಟಿಹೊಳೆಯಲ್ಲಿ ಮಾತಿನ ಚಕಮಕಿ ನಡೆಯಿತು.

ಕೊಡಗಿನ ಪ್ರವಾಹ ಸಂಭವಿಸಿದ ಪ್ರದೇಶಗಳಿಗೆ ಭೇಟಿ ನೀಡಿದ್ದ ಸಚಿವೆ ಭೂಕುಸಿತವಾಗಿರುವ ಹಟ್ಟಿಹೊಳೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಲ್ಲದೇ ಅಲ್ಲಿನ ನೆರೆ ಸಂತ್ರಸ್ತರೊಂದಿಗೆ ಮಾತಕತೆ ನಡೆಸಿ ಮಾಹಿತಿ ಪಡೆದರು.

ಈ ವೇಳೆ ಕಾಫಿ ಪ್ಲಾಂಟರ್ ಒಬ್ಬರು ಇಲ್ಲಿನ ಗ್ರಾಮಗಳ ಸ್ಥಳಾಂತರ ಮಾಡುವಂತೆ ಮನವಿ ಮಾಡಿದರು. ತಕ್ಷಣ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಜಿ ಬೋಪಯ್ಯ ಅವರು, ಯಾವುದೇ ಕಾರಣಕ್ಕೂ ಗ್ರಾಮಗಳ ಸ್ಥಳಾಂತರ ಮಾಡುವ ಮಾತುಬೇಡ ಎಂದು ಖಡಕ್ ಪ್ರತಿಕ್ರಿಯಿಸಿದರು.

ಸಂಪಾಜೆಯಲ್ಲಿರುವ ಪುನರ್ವಸತಿ ಕೇಂದ್ರದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ್ದ ಬೋಪಯ್ಯ, ಇಲ್ಲಿನ ಎಲ್ಲಾ ಗ್ರಾಮಗಳು ಸಂಪೂರ್ಣ ನಾಶವಾಗಿದ್ದು, ನಿರಾಶ್ರಿತರಿಗೆ ಈ ಹಿಂದೆ ಇರುವ ಸ್ಥಳದಲ್ಲೇ ಮತ್ತೆ ಮನೆ ನಿರ್ಮಾಣ ಮಾಡುವ ಪರಿಶೀಲನೆ ನಡೆಸುವ ಚಿಂತನೆ ಇದೆ. ತಜ್ಞರ ವರದಿ ಅನ್ವಯ ಸದ್ಯ ಕೆಲ ಪ್ರದೇಶಗಳು ವಾಸ ಮಾಡಲು ಸಾಧ್ಯವಿಲ್ಲ ಎಂದು ವರದಿ ನೀಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿ, ಭೂಕುಸಿತ ಸಂಭವಿಸಲು ಯಾವುದೇ ರೆಸಾರ್ಟ್ ಕಾರಣವಲ್ಲ. ರೆಸಾರ್ಟ್ ಇರುವ ಪ್ರದೇಶದಲ್ಲಿ ಮಾತ್ರ ಭೂ ಕುಸಿತ ಸಂಭವಿಸಿಲ್ಲ. ಹೆಚ್ಚು ಬಡಜನರೇ ಇರುವ ಕಡೆ ಭೂ ಕುಸಿತ ಸಂಭವಿಸಿದೆ. ಈ ಕುರಿತು ಸಂಪೂರ್ಣ ವರದಿ ಪಡೆಯಲಾಗುವುದು. ಆದರೆ ಗುಡ್ಡ ಕುಸಿತ ಬಗ್ಗೆ ಖಚಿತ ಮಾಹಿತಿ ಇಲ್ಲದೇ ಮಾತನಾಡುವುದು ಬೇಡ. ವೈಜ್ಞಾನಿಕ ವರದಿ ಬಂದ ಮೇಲೆ ಮಾತ್ರ ಈ ಕುರಿತು ಕ್ರಮಕೈಗೊಳ್ಳಲಾಗುತ್ತದೆ. ಆದರೆ ಈ ಕುರಿತು ಅಪಪ್ರಚಾರ ಬೇಡ ಎಂದು ತಿಳಿಸಿದ್ದರು.

ಇತ್ತ ಪ್ರವಾಹದಲ್ಲಿ ನಾಪತ್ತೆಯಾಗಿರುವ ಜನರ ಮೃತ ದೇಹ ಹೊರತೆಗೆಯುವ ಕಾರ್ಯಾಚರಣೆ, ತಾತ್ಕಾಲಿಕ ರಸ್ತೆ ಸಂಪರ್ಕ ಕಲ್ಪಿಸುವ ಹಾಗೂ ಗುಡ್ಡ ಕುಸಿತ ತೆರವು ಕಾರ್ಯಾಚರಣೆ ಮುಂದುವರಿಸುವಂತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೇನಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಭೂ ಕುಸಿತ ಪ್ರದೇಶ ವೀಕ್ಷಣೆಗೆ ತೆರಳಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಂಸದ ಪ್ರತಾಪ್ ಸಿಂಹ ಸಾಥ್ ನೀಡಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ