ಕೇರಳ ಪ್ರವಾಹ: ತಮಿಳುನಾಡು- ಕೇರಳ ನಡುವೆ ಕೆಸರೆರಚಾಟ

ಚೆನ್ನೈ: ಭಾರಿ ಮಳೆಯಿಂದ ಕೇರಳದಲ್ಲಿ ಭಾರಿ ಅನಾಹುತಕ್ಕೆ ತಮಿಳುನಾಡು ಮುಲ್ಲಪೆರಿಯಾರ್​ ಜಲಾಶಯದಿಂದ ದಿಢೀರ್ ನೀರು ಹರಿಸಿದ್ದು ಕಾರಣ ಎಂದು ಸುಪ್ರೀಂಕೋರ್ಟ್​ನಲ್ಲಿ ಕೇರಳ ಆರೋಪಿಸಿದೆ. ಇದಕ್ಕೆ ಪ್ರತ್ಯುತ್ತರ ನೀಡಿರುವ ತಮಿಳುನಾಡು ಸರ್ಕಾರ, ಕೇರಳ ಮಾಡಿರುವ ಆರೋಪ ನಿರಾಧಾರ ಹಾಗೂ ತಪ್ಪು ಮಾಹಿತಿ ಎಂದು ಕಿಡಿಕಾರಿದೆ.

ಈ ಬಗ್ಗೆ ಮಾತನಾಡಿರುವ  ತಮಿಳುನಾಡು ಸಿಎಂ ಪಳನಿಸ್ವಾಮಿ, ಕೇರಳ ಆರೋಪಕ್ಕೆ ಪ್ರತಿಯಾಗಿ ಹೊಸ ವಾದ ಮಂಡಿಸಿದ್ದಾರೆ.  ಡ್ಯಾಮ್​ನಿಂದ ನೀರು ಬಿಡುಗಡೆಯಾದರೆ ಒಂದು ಭಾಗದಲ್ಲಿ ಮಾತ್ರ ಪರಿಣಾಮ ಬೀರಬೇಕು. ಅದು ಹೇಗೆ ಕೇರಳದ ಎಲ್ಲ ಜಿಲ್ಲೆಗಳ ಮೇಲೆ ಹಾನಿಯಾಗುವಂತೆ ಮಾಡುತ್ತದೆ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ 80 ಡ್ಯಾಮ್​ಗಳಿಂದ ನೀರು ಬಿಡುಗಡೆ ಮಾಡಿದ್ದೇ ಪ್ರವಾಹಕ್ಕೆ ಕಾರಣ ಎಂದು ಹೇಳಿದ್ದಾರೆ.
ಇದೇ ವೇಳೆ,  ಮುಲ್ಲಪರಿಯಾರ್​ ಅಣೆಕಟ್ಟೆಯಿಂದ  ನೀರು ಬಿಡುವ ಮೊದಲು ಮೂರು ಬಾರಿ ಎಚ್ಚರಿಕೆ ನೋಟಿಸ್​ ನೀಡಲಾಗಿದೆ.   139,  141 ಹಾಗೂ 142 ಅಡಿ ನೀರು ಸಂಗ್ರಹವಾದಾಗೊಮ್ಮೆ ಎಚ್ಚರಿಕೆ ನೋಟಿಸ್​ ನೀಡಿದ್ದೇವೆ ಎಂದು  ತಮಿಳುನಾಡು ಸಿಎಂ ಪಳನಿಸ್ವಾಮಿ ಹೇಳಿದ್ದಾರೆ.
ಮುಲ್ಲಪೆರಿಯಾರ್​ ಜಲಾಶಯದಿಂದ  ನೀರು ಬಿಡುಗಡೆ ನಿಯಂತ್ರಿಸುವಂತೆ ಮನವಿ ಮಾಡಲಾಗಿತ್ತಾದರೂ ತಮಿಳುನಾಡು ಸರ್ಕಾರ ಅದನ್ನು ಕಡೆಗಣಿಸಿದ್ದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು ಎಂದು ಕೇರಳ ಸರ್ಕಾರ ಸುಪ್ರೀಂಕೋರ್ಟ್​ನಲ್ಲಿ ವಾದ ಮಂಡಿಸಿತ್ತು. ಈ ವಿಚಾರವೀಗ ಎರಡೂ ರಾಜ್ಯಗಳ ನಡುವಣ ವಾಗ್ಯುದ್ಧಕ್ಕೆ ಕಾರಣವಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ