ಬೆಂಗಳೂರು, ಆ.24- ದಂತವೈದ್ಯಕೀಯ ಶಿಕ್ಷಣ ಕೋರ್ಸ್‍ನ ಬಾಕಿ ಉಳಿದಿರುವ ಸೀಟುಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಆ.27 ಮತ್ತು ಸೆ.6ರಂದು ಮಾಪ್‍ಅಪ್ ರೌಂಡ್ ಕೌನ್ಸಿಲಿಂಗ್ ನಡೆಸುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ವೈದ್ಯಕೀಯ ಶಿಕ್ಷಣದ ಸಿಇಟಿ ಮಾಪ್‍ಅಪ್ ರೌಂಡ್ ಕೊನೆ ದಿನವಾದ ಇಂದು ಬೆಳಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈದ್ಯಕೀಯ ಶಿಕ್ಷಣದಲ್ಲಿ 65ಸಾವಿರ ಸೀಟುಗಳಿದ್ದವು. ಅದಕ್ಕೆ ನಡೆದ ನೀಟ್ ಪರೀಕ್ಷೆಯಲ್ಲಿ ರ್ಯಾಂಕಿಂಗ್ ಆಧಾರದ ಮೇಲೆ ಆನ್‍ಲೈನ್ ಕೌನ್ಸಿಲಿಂಗ್ ಮೂಲಕ ಮೆಡಿಕಲ್ ಸೀಟುಗಳನ್ನು ಹಂಚಿಕೆ ಮಾಡಲಾಗಿದೆ. ಬಾಕಿ ಉಳಿದಿದ್ದ 740 ಸೀಟುಗಳಿಗೆ ನಿನ್ನೆ ಮತ್ತು ಇಂದು ಕೊನೆಯ ಸುತ್ತಿನ ಮಾಪ್‍ಅಪ್ ರೌಂಡನ್ನು ನಡೆಸಲಾಗಿದೆ ಎಂದು ಹೇಳಿದರು.
ರಾಜ್ಯದ ಪಾಲಿಗೆ 8250 ಸೀಟುಗಳು ಬಂದಿದ್ದವು. ಅದರಲ್ಲಿ 1880 ಸೀಟುಗಳು ಡೀಮ್ಡ್ ಯೂನಿವರ್ಸಿಟಿಗೆ ಸೇರಿದ್ದಾಗಿದ್ದು, ಅವುಗಳಿಗೆ ಅಖಿಲ ಭಾರತ ಮಟ್ಟದಲ್ಲಿ ಕೌನ್ಸಿಲಿಂಗ್ ನಡೆದಿದೆ. ರಾಜ್ಯದ 49 ವೈದ್ಯಕೀಯ ಕಾಲೇಜುಗಳಿಂದ 6260 ಸೀಟುಗಳಿಗೆ ಆನ್‍ಲೈನ್ ಕೌನ್ಸಿಲಿಂಗ್ ನಡೆಸಲಾಗಿದೆ. ಕೌನ್ಸಿಲಿಂಗ್‍ನಲ್ಲಿ ಬಹಳಷ್ಟು ಮಂದಿ ಸೀಟು ಪಡೆದುಕೊಂಡಿದ್ದಾರೆ. ಎಲ್ಲವನ್ನೂ ಅತ್ಯಂತ ಪಾರದರ್ಶಕವಾಗಿ ಯಾವುದೇ ಗೊಂದಲಗಳಿಗೆ ಅವಕಾಶ ಇಲ್ಲದಂತೆ ನಡೆಸಲಾಗಿದೆ ಎಂದರು.
ನಾನು ವಿದ್ಯಾರ್ಥಿಗಳು ಮತ್ತು ಪೆÇೀಷಕರ ಜತೆ ಮಾತನಾಡಿದ್ದೇನೆ. ಪರೀಕ್ಷಾ ಪ್ರಾಧಿಕಾರ ನಡೆಸಿದ ಪಾರದರ್ಶಕ ಕೌನ್ಸಿಲಿಂಗ್ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರಿಗೆ ಸೀಟು ಸಿಗದೇ ಇರಬಹುದು. ಆದರೆ, ಅರ್ಹರಿಗೆ ಸೀಟು ಸಿಕ್ಕಿದೆ. ನಿನ್ನೆ ಮತ್ತು ಇಂದು ಕೊನೆಯ ಸುತ್ತಿನ ಮಾಪ್‍ಅಪ್ ರೌಂಡ್‍ನಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗಿದ್ದು, ಸೀಟು ಪಡೆಯಲು ಇಚ್ಚಿಸುವವರು ಮತ್ತು ಸಾಮಥ್ರ್ಯ ಇರುವವರು ಸ್ಥಳದಲ್ಲೇ ಆಯ್ಕೆಯಾಗಿದ್ದಾರೆ. ಕೆಲವರು ನಮಗೆ ಸೀಟು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಹೇಳಿ ಕೈ ಚೆಲ್ಲಿ ಹೋಗಿದ್ದಾರೆ ಎಂದು ತಿಳಿಸಿದರು.
ರಜಾ ದಿನವಾಗಿದ್ದರೂ ಯಾರಿಗೂ ತೊಂದರೆಯಾಗದಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆವರಣದಲ್ಲೇ ಬ್ಯಾಂಕ್‍ಗಳ ಕೌಂಟರ್‍ಗಳನ್ನು ಸ್ಥಾಪಿಸಲಾಗಿದೆ. ಪೆÇೀಷಕರಿಗೆ ಹೆಚ್ಚಿನ ಮಾಹಿತಿ ನೀಡಲು 15 ಟೆಲಿಫೆÇೀನ್ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಈಗಾಗಲೇ ವಿದ್ಯಾರ್ಥಿಗಳಿಗೆ ಎಸ್‍ಎಂಎಸ್ ಮೂಲಕ ಎಲ್ಲಾ ಮಾಹಿತಿ ನೀಡಿರುವುದರಿಂದ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲ. ವಿದ್ಯಾರ್ಥಿಗಳ ಜತೆ ಯಾರು ಬರಬೇಕು ಎಂಬುದನ್ನೂ ಮೊದಲೇ ನಿರ್ದಿಷ್ಟಪಡಿಸಲಾಗಿದೆ. ಬಂದವರು ಯಾರು ಎಂಬ ಬಗ್ಗೆಯೂ ಭಾವಚಿತ್ರ ತೆಗೆದಿಟ್ಟುಕೊಳ್ಳಲಾಗಿದೆ ಎಂದರು.
ನಾವು ನಡೆಸಿರುವ ಸಿಇಟಿ ಕೌನ್ಸಿಲಿಂಗ್ ದೇಶದಲ್ಲೇ ಮಾದರಿಯಾಗಿದ್ದು, ಮಹಾರಾಷ್ಟ್ರ, ಕೇರಳ, ತಮಿಳುನಾಡು ರಾಜ್ಯಗಳು ನಮ್ಮನ್ನು ಅನುಸರಿಸಿವೆ. ಸರ್ಕಾರ ಯಾವುದೇ ಹಂತದಲ್ಲೂ ಪರೀಕ್ಷಾ ಪ್ರಾಧಿಕಾರದ ಕಾರ್ಯಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡಲಿಲ್ಲ. ಮುಕ್ತ ವಾತಾವರಣ ನೀಡಿದೆ. ಇಲ್ಲಿನ ಕಾರ್ಯನಿರ್ವಹಣಾಧಿಕಾರಿ ಮತ್ತು ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ. ಅವರಿಗೆ ಸರ್ಕಾರ ಮುಕ್ತ ಸ್ವಾತಂತ್ರ್ಯ ನೀಡಿದೆ ಎಂದು ಹೇಳಿದರು.
ನಿನ್ನೆ ಮತ್ತು ಇಂದು ನಡೆದ ವೈದ್ಯಕೀಯ ಕೌನ್ಸಿಲಿಂಗ್‍ನ ಮಾಪ್‍ಅಪ್‍ನಲ್ಲಿ ನೆರೆ ಪೀಡಿತ ಕೊಡಗು ಮತ್ತು ಕೇರಳದ ವಿದ್ಯಾರ್ಥಿಗಳು ಭಾಗವಹಿಸಲು ಸಾಧ್ಯವಾಗದೇ ಇರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ವಿಷಯದಲ್ಲಿ ಸರ್ಕಾರ ಏನೂ ಮಾಡಲು ಸಾಧ್ಯವಿಲ್ಲ. ಇದು ಅಖಿಲ ಭಾರತ ಮಟ್ಟದ ಕೌನ್ಸಿಲಿಂಗ್. ಹಾಗಾಗಿ ಒಂದು ಜಿಲ್ಲೆ, ಒಂದು ರಾಜ್ಯದ ಅನಾನುಕೂಲವನ್ನು ನೋಡಿಕೊಂಡು ನಿಯಮಾವಳಿಗಳನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಎಲ್ಲವೂ ವೈದ್ಯಕೀಯ ಪರಿಷತ್ತಿನ ನಿಯಮಾನುಸರವಾಗಿ ನಡೆದಿದೆ ಎಂದು ತಿಳಿಸಿದರು.
ವೈದ್ಯಕೀಯ ಶಿಕ್ಷಣದ ಶುಲ್ಕ ಹೆಚ್ಚಾಗಿರುವ ಬಗ್ಗೆ ಕೇಳಿ ಬಂದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ಈಗಿನ ಕಾಲದಲ್ಲಿ ಎಲ್‍ಕೆಜಿ ಮಕ್ಕಳಿಗೆ 50ಸಾವಿರ ರೂ. ಶುಲ್ಕ ನೀಡುತ್ತಿದ್ದಾರೆ. ಇನ್ನು ವೈದ್ಯಕೀಯ ಶಿಕ್ಷಣದಂತಹ ಕೋರ್ಸ್‍ಗಳಿಗೆ 50ಸಾವಿರ ನಿಗದಿ ಪಡಿಸಿರುವುದು ದೊಡ್ಡದಲ್ಲ. ಈವರೆಗೂ ನಮ್ಮ ಬಳಿ ಆಕ್ಷೇಪ ವ್ಯಕ್ತಪಡಿಸಿಲ್ಲ. ಇನ್ನೂ ಹೆಚ್ಚು ಶುಲ್ಕ ನಿಗದಿ ಮಾಡಿದರೂ ಜನ ಪಾವತಿಸುತ್ತಾರೆ ಎಂದು ಹೇಳಿದರು.
ದಂತ ವೈದ್ಯಕೀಯ ಶಿಕ್ಷಣಕ್ಕೆ ಮಾಪ್‍ಆಪ್ ರೌಂಡ್:
ದಂತ ವೈದ್ಯಕೀಯ ಶಿಕ್ಷಣಕ್ಕೆ 2767 ಸೀಟುಗಳು ಲಭ್ಯವಿದ್ದು, ಇವುಗಳಿಗೆ ಈಗಾಗಲೇ ಆನ್‍ಲೈನ್ ಮೂಲಕ ಬಹುತೇಕ ಸೀಟುಗಳು ಹಂಚಿಕೆಯಾಗಿವೆ. ಬಾಕಿ ಇರುವ 772 ಸೀಟುಗಳಿಗೆ ಆ.27 ಹಾಗೂ ಸೆ.6ರಂದು ಮಾಪ್‍ಅಪ್ ರೌಂಡ್ ಕೌನ್ಸಿಲಿಂಗ್ ನಡೆಸಲಾಗುವುದು. ಸೆ.15ರೊಳಗೆ ದಂತ ವೈದ್ಯಕೀಯ ಶಿಕ್ಷಣದ ಕೌನ್ಸಿಲಿಂಗನ್ನು ಪೂರ್ಣಗೊಳಿಸಲಾಗುವುದು ಎಂದರು.
ಆಕಾಶ್ ಮೆಡಿಕಲ್ ಕಾಲೇಜು, ಆಕ್ಸ್‍ಫರ್ಡ್ ಮೆಡಿಕಲ್ ಕಾಲೇಜು, ಶ್ರೀದೇವಿ ಹಾಗೂ ಸಂಭ್ರಮ ಮೆಡಿಕಲ್ ಕಾಲೇಜುಗಳ ಪ್ರವೇಶಕ್ಕೆ ತಡೆಯಾಜ್ಞೆ ಇದೆ. ಅದನ್ನು ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸಿದ್ದಾರೆ. ಸುಪ್ರೀಂಕೋರ್ಟ್‍ನಿಂದ ಅನುಮತಿ ಸಿಕ್ಕರೆ ಪ್ರತಿ ಕಾಲೇಜಿನಿಂದಲೂ ತಲಾ 150 ಸೀಟಿನಂತೆ 600 ಸೀಟುಗಳು ಲಭ್ಯವಾಗುತ್ತವೆ. ಅವುಗಳಿಗೂ ಕೌನ್ಸಿಲಿಂಗ್ ಮೂಲಕ ಸೀಟು ಹಂಚಿಕೆ ಮಾಡಲಾಗುವುದು ಎಂದು ಡಿ.ಕೆ.ಶಿವಕುಮಾರ್ ವಿವರಿಸಿದರು.