ಕಿರಿಕ್ ಪಾರ್ಟಿ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ರಿಷಬ್ ಶೆಟ್ಟಿ ನಿರ್ದೇಶನದ ಸರ್ಕಾರಿ ಹಿ. ಪ್ರಾ. ಶಾಲೆ ಕಾಸರಗೋಡು ಚಿತ್ರ ಇಂದು ರಾಜ್ಯಾದ್ಯಂತ ತೆರೆ ಕಾಣುತ್ತಿದ್ದು ಚಿತ್ರದ ಕುರಿತಂತೆ ನಿರ್ದೇಶಕರು ಮಾತನಾಡಿದ್ದಾರೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದಲ್ಲಿ ಹೆಚ್ಚು ಮಕ್ಕಳು ಅಭಿನಯಿಸಿದ್ದಾರೆ ಆದರೆ ಇದು ಮಕ್ಕಳ ಚಿತ್ರವಲ್ಲ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
ಚಿತ್ರದಲ್ಲಿ 52 ಮಕ್ಕಳ ಅಭಿನಯಿಸಿದ್ದು ಇವರ ಪೈಕಿ 10 ಮಕ್ಕಳ ಪಾತ್ರ ಹೆಚ್ಚು ಪ್ರಾಮುಖ್ಯತೆ ಹೊಂದಿದೆ. ಇನ್ನು ಮಕ್ಕಳ ಜತೆಗೆ ಹಿರಿಯ ನಟರು ಚಿತ್ರದಲ್ಲಿ ನಟಿಸಿದ್ದಾರೆ ಎಂದು ಹೇಳಿದರು.
ಚಿತ್ರದಲ್ಲಿ ಹೆಚ್ಚಾಗಿ ಮಕ್ಕಳೆ ಕಾಣಿಸಿಕೊಂಡಿದ್ದಾರೆ ಅಂತ ಇದು ಮಕ್ಕಳ ಚಿತ್ರವಲ್ಲ. ಹಾಲಿವುಡ್ ನಲ್ಲಿ ಇಂತಹ ಚಿತ್ರಗಳು ತಯಾರಾಗಿವೆ. ಹಾಲಿವುಡ್ ನಲ್ಲಿ ಅವಾರ್ಡ್ ಗಳಿಗಾಗಿ ಮಕ್ಕಳ ಚಿತ್ರಗಳನ್ನು ತಯಾರಿಸುತ್ತಾರೆ ಎಂಬ ಭಾವನೆ ಇದೆ. ಆದರೆ ಇಲ್ಲಿ ಮಕ್ಕಳ ಜೊತೆಗೆ ಖ್ಯಾತ ನಟ-ನಟಿಯರು ಅಭಿನಯಿಸಿದ್ದಾರೆ ಎಂದರು.
ಚಿತ್ರದಲ್ಲಿ ಶಿಕ್ಷಣ, ಮಾತೃಭಾಷೆ ಕುರಿತಂತೆ ಹೆಚ್ಚು ಪ್ರಮುಖ್ಯತೆ ನೀಡಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ವಿಷಯವನ್ನೇ ಚಿತ್ರದ ಕಥೆಯಾಗಿ ಬಳಸಿಕೊಳ್ಳಲಾಗಿದೆ. ಚಿತ್ರ ಹಾಸ್ಯಾತ್ಮಕವಾಗಿ ಮೂಡಿ ಬಂದಿದೆ ಎಂದರು.
ಚಿತ್ರದಲ್ಲಿ ಒಂಬತ್ತು ಹಾಡುಗಳಿದ್ದು ವಾಸುಕಿ ವೈಭವ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಇನ್ನು ಹಿನ್ನಲೆ ಸಂಗೀತವನ್ನು ಅಜನೇಶ್ ಬಿ ಲೋಕನಾಥ್ ನೀಡಿದ್ದಾರೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.