ಮಾಜಿ ಪ್ರಧಾನಿಗೆ ಅಗೌರವ ತೋರಿದ ಕಾರ್ಪರೇಟರ್ ಸಯ್ಯದ್‌ ಮತೀನ್‌ ರಷೀದ್‌ ಒಂದು ವರ್ಷ ನ್ಯಾಯಾಂಗ ಬಂಧನಕ್ಕೆ

ಔರಂಗಾಬಾದ್‌:ಆ-23: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಯಪೇಯಿ ಅವರಿಗೆ ಅಗೌರವ ತೋರಿದ ಔರಂಗಾಬಾದ್‌ ಪುರಸಭೆಯ ಸದಸ್ಯ ಸಯ್ಯದ್‌ ಮತೀನ್‌ ರಷೀದ್‌ ಅವರನ್ನು ಒಂದು ವರ್ಷಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಗಲಭೆ, ಕೋಮು ಹಿಂಸೆಗೆ ಪ್ರಚೋದನೆ, ಭಯದ ವಾತಾವರಣ ಸೃಷ್ಟಿ ಹಿನ್ನಲೆಯಲ್ಲಿ ಅಕ್ರಮ ಮದ್ಯ ನಿಗ್ರಹಿಸುವ ಮಹಾರಾಷ್ಟ್ರ ಕಾಯಿದೆ 1981(ಎಂಪಿಡಿಎ)ರ ಪ್ರಕಾರ ಆಲ್‌–ಇಂಡಿಯಾ ಮಜೀಸ್‌–ಇ ಮುಸ್ಲೀಮಿನ್‌(ಎಐಎಮ್‌ಐಎಮ್‌) ಪಕ್ಷದ ಕಾರ್ಪೊರೇಟರ್‌ ಸಯ್ಯದ್‌ ವಿರುದ್ಧ ಔರಂಗಾಬಾದ್‌ ಸಿಟಿ ಚೌಕ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.

ಆಗಸ್ಟ್‌ 16 ರಂದು ನಿಧನರಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಪುರಸಭೆಯಲ್ಲಿ ಗೌರವ ಸಲ್ಲಿಸಲು ಕಳೆದ ವಾರ ನಿರ್ಧರಿಸಲಾಗಿತ್ತು. ಇದನ್ನು ವಿರೋಧಿಸಿದ್ದ ಸಯ್ಯದ್‌ ಮೇಲೆ ಬಿಜೆಪಿಯ ಕೆಲವು ಕಾರ್ಪೊರೇಟರ್‌ಗಳು ಹಲ್ಲೆ ನಡೆಸಿದ‌್ದರು. ಜೊತೆಗೆ ಪುರಸಭೆಯಲ್ಲಿರುವ ಎರಡು ಧರ್ಮದ ಸದಸ್ಯರ ನಡುವೆ ದ್ವೇಷ ಹರಡಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರು ನೀಡಿದ್ದರು.

ಈ ಪ್ರಕರಣಕ್ಕೆ ಸಂಬಂದಿಸಿದಂತೆ ಸಯ್ಯದ್‌ ಅವರು ಜಾಮೀನು ಪಡೆದು ಹರ್ಷಲ್‌ ಜೈಲಿನಿಂದ ಮಂಗಳವಾರ ಬಿಡುಗಡೆ ಹೊಂದುತ್ತಿದ್ದಂತೆ ಸ್ಥಳಕ್ಕೆ ಬಂದ ಸಿಟಿ ಚೌಕ್‌ ಪೊಲೀಸ್‌ ಠಾಣೆಯ ತಂಡ ಎಂಪಿಡಿಎ ಅಡಿಯಲ್ಲಿ ಮತ್ತೆ ಬಂಧಿಸಿದೆ. ಸದ್ಯ ಅವರನ್ನು ಹರ್ಷಲ್‌ ಜೈಲಿನಲ್ಲಿ ಒಂದು ವರ್ಷ ಕಾಲ ನ್ಯಾಯಾಂಗಕ್ಕೆ ಒಪ್ಪಿಸಲಾಗಿದೆ.

ಈ ಕುರಿತು ಔರಂಗಾಬಾದ್‌ ಕಮಿಷನರ್‌ ಚಿರಂಜೀವ್‌ ಪ್ರಸಾದ್‌ ಅವರು ಖಚಿತ ಪಡಿಸಿದ್ದಾರೆ. ಈ ಹಿಂದೆಯೂ ಸಯ್ಯದ್, ಪುರಸಭೆಯಲ್ಲಿ ರಾಷ್ಟ್ರಗೀತೆ ಹಾಡುವ ವಿಚಾರಕ್ಕೆ ಸಂಬಂಧಿಸಿದಂತೆ ವಿರೋಧ ವ್ಯಕ್ತಪಡಿಸಿದ್ದರು.

ಇನ್ನು ಸಯ್ಯದ್‌ ಬಂಧನವನ್ನು ವಿರೋಧಿಸಿರುವ ಎಐಎಮ್‌ಐಎಮ್‌ ಪಕ್ಷದ ಶಾಸಕ ಸಯ್ಯದ್‌ ಇಮ್ತಾಜ್‌ ಜಲೀಲ್‌, ‘ಸಯ್ಯದ್‌ ಅವರನ್ನು ರಾಜಕೀಯ ಕಾರಣದಿಂದ ಬಂಧಿಸಲಾಗಿದೆ. ವಾಜಪೇಯಿ ನಿಧನಕ್ಕೆ ನಮ್ಮ ಪಕ್ಷವೂ ಸಂತಾಪ ಸೂಚಿಸಿದೆ. ಈ ಬಗ್ಗೆ ಪ್ರಕಟಣೆಯನ್ನೂ ಹೊರಡಿಸಿದ್ದೇವೆ. ಮಾಜಿ ಪ್ರಧಾನಿಗೆ ಗೌರವ ಸಲ್ಲಿಸುವ ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸುವ ಕುರಿತು ರಷೀದ್‌ ಪ್ರಸ್ತಾಪಿಸಿರಲಿಲ್ಲ. ಅವರ ಮೇಲೆ ಬಿಜೆಪಿ ಸದಸ್ಯರು ಹಲ್ಲೆ ನಡೆಸಿದ್ದಾರೆ. ನಮ್ಮ ಬಳಿ ಸಿಸಿಟಿವಿ ದೃಶ್ಯಾವಳಿಗಳಿವೆ ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ