ಕೊಚ್ಚಿ:ಆ-23: ಪ್ರವಾಹದಿಂದ ತತ್ತರಿಸಿರುವ ದೇವರ ನಾಡು ಕೇರಳದಲ್ಲಿ ಸತತ 14 ದಿನಗಳ ಕಾರ್ಯಾಚರಣೆ ನಡೆಸಿದ ನೌಕಾಪಡೆ ರಕ್ಷಣಾ ಕಾರ್ಯಾಚರಣೆಯನ್ನು ಅಂತ್ಯಗೊಳಿಸಿದೆ.
16,005 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿರುವ ನೌಕಾಪಡೆಯು ಬುಧವಾರ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ, ನೆರವಿಗಾಗಿ ಬರುವ ಮನವಿ ಪ್ರಮಾಣವೂ ಕ್ಷೀಣಿಸಿದೆ. ಹೀಗಾಗಿ ಕಾರ್ಯಾಚರಣೆಯನ್ನು ನಿಲ್ಲಿಸುತ್ತಿದ್ದೇವೆ ಎಂದು ನೌಕಾಪಡೆ ಹೇಳಿದೆ.
ನೌಕಾಪಡೆಯ ಆದೇಶದಂತೆ ಪ್ರವಾಹ ಸಂತ್ರಸ್ತರ ರಕ್ಷಣೆಗಾಗಿ ನಿಯೋಜಿಸಲಾಗಿರುವ #ಆಪರೇಷನ್‌ಮದಾದ್ ಪಡೆಯ ಸಿಬ್ಬಂದಿ ‘ನೀರಿನ ಹರಿವಿನ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಮನವಿಗಳೂ ಕಡಿಮೆಯಾಗಿವೆ’ ಎಂದು ತಿಳಿಸಿದ್ದಾರೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆಪರೇಷನ್ ಮದಾದ್ ಕಾರ್ಯಾಚರಣೆಯು ಆಗಸ್ಟ್ 9ರಂದು ಆರಂಭವಾಗಿತ್ತು.
ನೌಕಾಪಡೆ ಮಾತ್ರವಲ್ಲದೆ, ಸೇನಾ ಸಿಬ್ಬಂದಿ, ವಾಯುಪಡೆಗಳು, ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಹಾಗೂ ಮೀನುಗಾರರೂ ಪರಿಹಾರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಪ್ರವಾಹದಿಂದಾಗಿ ಆಗಸ್ಟ್ 15 ರಿಂದ ಮುಚ್ಚಲ್ಪಟ್ಟಿರುವ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಆಗಸ್ಟ್ 29 ರಂದು ಪುನಃ ತೆರೆಯಲಿದೆ.
‘ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವ ಸಲುವಾಗಿ ಆಗಸ್ಟ್ 26 ರಂದು ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.