ವಾಷಿಂಗ್ ಟನ್: ಸತತ ಮೂರನೆಯ ವರ್ಷದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ಮಹಿಳಾ ಅಥ್ಲೀಟ್ ಆಗಿ ಪ್ರಖ್ಯಾತ ಟೆನ್ನಿಸ್ ತಾರೆ ಸೆರೆನಾ ವಿಲಿಯಮ್ಸ್ ಹೊರಹೊಮ್ಮಿದ್ದು ಫೊರ್ಬ್ಸ್ ನಿಯತಕಾಲಿಕ ಮಂಗಳವಾರ ಪ್ರಕಟಿಸಿರುವ ವಾರ್ಷಿಕ ಪಟ್ಟಿಯಲ್ಲಿ ಇದು ಬಹಿರಂಗವಾಗಿದೆ.
ಪಟ್ಟಿಯ ಟಾಪ್ ಹತ್ತರ ಸ್ಥಾನದಲ್ಲಿ ಬಹುತೇಕ ಟೆನ್ನಿಸ್ ಆಟಗಾರರೇ ಇದ್ದು ಭಾರತದ ಬ್ಯಾಡ್ಮಿಂಟನ್ ಪ್ರತಿಭೆ ಪಿವಿ ಸಿಂಧೂ ಟಾಪ್ ಟೆನ್ ಲಿಸ್ಟ್ ನಲ್ಲಿರುವ ಏಕೈಕ ಭಾರತೀಯರೆನಿಸಿದ್ದಾರೆ.
ಕಳೆದ ಸೆಪ್ಟೆಂಬರ್ ನಲ್ಲಿ ಮಗುವಿನ ತಾಯಿಯಾಗಿದ್ದ ವಿಲಿಯಮ್ಸ್ ಈ ವರ್ಷ ಮಾರ್ಚ್ ಗೆ ಮತ್ತೆ ಟೆನ್ನಿಸ್ ಅಂಗಳಕ್ಕೆ ಮರಳಿದ್ದರು.ಕಳೆದ ವರ್ಷದಲ್ಲಿ 62,000 ಡಾಲರ್ ಗಳಿಸಿದ್ದ ಈಕೆ ಎಂಡೋರ್ಸ್ಮೆಂಟ್ ಪೋರ್ಟ್ಫೋಲಿಯೊದಿಂದ 18.1 ಮಿಲಿಯನ್ ಡಾಲರ್ ಗಳಿಸಿದ್ದಾರೆ ಎಂದು ಫೋರ್ಬ್ಸ್ ಹೇಳಿದೆ.
ಇನ್ನು ಈ ವರ್ಷ ಆಸ್ಟ್ರೇಲಿಯ ಓಪನ್ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆಲ್ಲುವ ಮೂಲಕ ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಕ್ಯಾರೋಲಿನ್ ವೊಜ್ನಿಯಾಕಿ ಫೊರ್ಬ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.ಈಕೆ 13 ಮಿಲಿಯನ್ ಡಾಲರ್ ಸಂಭಾವನೆ ಪಡೆದಿದ್ದರು.
ಸ್ಲೋನೇನ್ ಸ್ಟೀಫನ್ಸ್, ಸ್ಪಾನಿಯಾರ್ಡ್ ಗಾರ್ಬಿನ್ ಮುಗುರುಜಾ, ಮತ್ತು ರಷ್ಯಾದ ಮಾರಿಯಾ ಶರಾಪೋವಾ ಕ್ರಮವಾಗಿ ಮೂರು, ನಾಲ್ಕು ಹಾಗೂ ಐದನೇ ಸ್ಥಾನ ಹೊಂದಿದ್ದಾರೆ.
ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧೂ ಪಟ್ಟಿಯಲ್ಲಿ ಏಳನೇ ಸ್ಥಾನ ಗಿಟ್ಟಿಸಿದ್ದಾರೆ. ಇವರು 8.5 ಮಿಲಿಯನ್ ಡಾಲರ್ ಸಂಬಾವನೆ ಪಡೆಯುವ ಮೂಲಕ ಪಟ್ಟಿಯಲ್ಲಿ ತಮ್ಮ ಸ್ಥಾನ ಹೊಂದಿದ್ದಾರೆ. ಇದರೊಡನೆ ನಿವೃತ್ತ ರೇಸ್ ಕಾರ್ ಚಾ ಚಾಲಕಿ ಧಾನಿಕಾ ಪ್ಯಾಟ್ರಿಕ್ 7.5 ದಶಲಕ್ಷ ಡಾಲರ್ ಸಂಬಾವನೆಯೊಡನೆ ಪಟ್ಟಿಯಲ್ಲಿ ಒಂಭತ್ತನೇ ಸ್ಥಾನ ಹೊಂದಿದ್ದು ಸಿಂಧೂ ಮತ್ತು ಪ್ಯಾಟ್ರಿಕ್ ಹೊರತು ಉಳಿದೆಲ್ಲರೂ ಟೆನ್ನಿಸ್ ಆಟಗಾರ್ತಿಯರೆನ್ನುವುದು ಗಮನಾರ್ಹ.
ಜೂನ್ ತಿಂಗಳಲ್ಲಿ, ಫೋರ್ಬ್ಸ್ ವಿಶ್ವದ 100 ಅತಿ ಹೆಚ್ಚು ಸಂಭಾವನೆ ಪಡೆಯುವ ಅಥ್ಲೀಟ್ ಗಳ ಪಟ್ಟಿಯನ್ನು ನೀಡಿದ್ದು ಇದರಲ್ಲಿ ಮಹಿಳೆಯರನ್ನು ಸೇರಿಸಿಕೊಳ್ಳಲಾಗಿರಲಿಲ್ಲ.