ಜಕಾರ್ತಾ: ಆ.21 ರಂದು ನಡೆದ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಮಹಿಳಾ ಹಾಕಿ ತಂಡಕ್ಕೆ ಕೇವಲ ಒಂದು ಗೋಲ್ ನಿಂದ ವಿಶ್ವ ದಾಖಲೆ ಕೈತಪ್ಪಿತ್ತು. ಆದರೆ ಆ.22 ರಂದು ನಡೆದ ಪಂದ್ಯದಲ್ಲಿ ಪುರುಷರ ವಿಭಾಗದ ಹಾಕಿ ತಂಡ ಏಷ್ಯನ್ ಗೇಮ್ಸ್ ನಲ್ಲಿ 86 ವರ್ಷಗಳ ವಿಶ್ವ ದಾಖಲೆಯನ್ನು ಪುಡಿಗಟ್ಟಿದೆ.
18 ನೇ ಆವೃತ್ತಿಯ ಏಷ್ಯನ್ ಗೇಮ್ಸ್ ನಲ್ಲಿ ಪೂಲ್ ಎ ಮ್ಯಾಚ್ ನಲ್ಲಿ ಹಾಂಕ್ ಕಾಂಗ್ ವಿರುದ್ಧ 26-0 ಗೋಲ್ ಅಂತರದಿಂದ ಭಾರತದ ಪುರುಷರ ಹಾಕಿ ತಂಡ ಗೆದ್ದಿದೆ. ಇದು ಭಾರತ ಪುರುಷರ ವಿಭಾಗದ ಹಾಕಿ ತಂಡದ ಗೆಲುವಿನ ಗರಿಷ್ಠ ಅಂತರವಾಗಿದ್ದು, 86 ವರ್ಷಗಳ ದಾಖೆಲೆಯನ್ನು ಭಾರತ ಮುರಿದಿದೆ. 1932 ರ ಲಾಸ್ ಏಂಜಲೀಸ್ ಒಲಂಪಿಕ್ಸ್ ನಲ್ಲಿ ಅಮೆರಿಕ ವಿರುದ್ಧ 24-1 ಅಂತರದಿಂದ ಗೆದ್ದಿದ್ದು ಗರಿಷ್ಠ ಗೆಲುವಿನ ಅಂತರವಾಗಿ ದಾಖಲಾಗಿತ್ತು. ಈಗ 26-0 ಗೋಲ್ ಗಳ ಅಂತರದಿಂದ ಗೆದ್ದಿರುವ ಭಾರತ ಹೊಸ ಇತಿಹಾಸ ನಿರ್ಮಿಸಿದೆ.
ಆಕಾಶ್ ದೀಪ್ ಸಿಂಗ್ ಅವರು ಸ್ಫೋಟಕ ಆಟ ಪ್ರದರ್ಶಿಸಿದ್ದು, 2 ನೇ ನಿಮಿಷದಲ್ಲೇ ಗೋಲ್ ದಾಖಲಿಸಿದರು, ಇನ್ನು ಮನ್ಪ್ರೀತ್ ಸಿಂಗ್ 3 ನೇ ನಿಮಿಷ, ರುಪೇಂದರ್ ಪಾಲ್ (4, 5 ನೇ ನಿಮಿಷದಲ್ಲಿ) ಗೋಲ್ ದಾಖಲಿಸಿದರೆ 7 ನೇ ನಿಮಿಷದಲ್ಲಿ ಎಸ್ ವಿ ಸುನಿಲ್ ಎರಡು ಗೋಲ್ ದಾಖಲಿಸಿ ಅಚ್ಚರಿ ಮೂಡಿಸಿದರು, ಈ ಸ್ಫೋಟಕ ಆಟದ ಪರಿಣಾಮವಾಗಿ 7 ನಿಮಿಷಗಳಲ್ಲಿ 6 ಗೋಲ್ ಗಳನ್ನು ದಾಖಲಿಸಿದ್ದ ಭಾರತ 6-0 ಅಂತರದ ಮುನ್ನಡೆ ಕಾಯ್ದುಕೊಂಡಿತ್ತು. ಇದಾದ ಬಳಿಕ 13 ನೇ ನಿಮಿಷದಲ್ಲಿ ವಿವೇಕ್ ಸಾಗರ್ ಪ್ರಸಾದ್ ದಾಖಲಿಸಿದ ಗೋಲ್ ನೆರವಿನಿಂದ ಭಾರತ ಮೊದಲ ಕ್ವಾರ್ಟರ್ ಅಂತ್ಯಕ್ಕೆ 7-0 ಅಂತರದ ಮುನ್ನಡೆ ಸಾಧಿಸಿತ್ತು.
ಮೊದಲ ಕ್ವಾರ್ಟರ್ ನಂತರವೂ ತಮ್ಮ ಅದ್ಭುತ ಆಟವನ್ನು ಮುಂದುವರೆಸಿದ ಭಾರತ ತಂಡಕ್ಕೆ ಲಲಿತ್ ಉಪಾಧ್ಯಾಯ್, ಅಮಿತ್ ರೋಹಿಡಾಸ್, ಮನ್ಪ್ರೀತ್, ವರುಣ್ ಕುಮಾರ್, ಆಕಾಶ್ ದೀಪ್, ಸುನಿಲ್, ದಿಲ್ಪ್ರೀತ್ ಸಿಂಗ್, ಚೆಂಗ್ಲೆನ್ಸಾನ ಸಿಂಗ್, ಹರ್ಮನ್ ಪ್ರೀತ್ ಸಿಂಗ್, ಸಿಮ್ರಾನ್ಜೀತ್ ಸ್ ಇಂಗ್, ಸುಪೀಂದರ್ ಅವರ ಗೋಲ್ ನೆರವಿನಿಂದ ಒಟ್ಟು 26-0 ಅಂತರದ ಗೆಲುವು ಸಾಧ್ಯವಾಯಿತು. ಈ ಬೃಹತ್ ಅಂತರದ ಜಯದಿಂದ ಭಾರತ ಕೇವಲ ಎರಡೇ ಪಂದ್ಯಗಳಲ್ಲಿ 43 ಗೋಲ್ ಗಳನ್ನು ದಾಖಲಿಸಿದೆ. ಮೊದಲ ಪಂದ್ಯದಲ್ಲಿ ಇಂಡೋನೇಷ್ಯಾ ವಿರುದ್ಧ 17-0 ಅಂತರದಿಂದ ಭಾರತ ಗೆದ್ದಿತ್ತು.