ಮೂರು ತಿಂಗಳ ಪಿಂಚಣಿಯನ್ನು ಸಿಎಂ ಪರಿಹಾರ ನಿಧಿಗೆ ನೀಡಿದ ಅರಣ್ಯ ಇಲಖೆ ನಿವೃತ್ತ ನೌಕರ

 

ಬೆಂಗಳೂರು, ಆ.21- ಕೊಡಗಿನಲ್ಲಿ ನೆರೆಯಿಂದ ಜನಸಾಮಾನ್ಯರು ಪಡುತ್ತಿರುವ ಕಷ್ಟಕ್ಕೆ ಮಣಿದಿರುವ ಅರಣ್ಯ ಇಲಖೆಯ ನಿವೃತ್ತ ನೌಕರರೊಬ್ಬರು ತಮ್ಮ ಮೂರು ತಿಂಗಳ ಪಿಂಚಣಿಯನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದಾರೆ.
ಇಂದು ಬೆಳಗ್ಗೆ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿರುವ ನಿವೃತ್ತ ನೌಕರ ವೆಂಕಟರಾಮಯ್ಯ ಅವರು 50ಸಾವಿರ ರೂ. ದೇಣಿಗೆಯ ಚೆಕ್ಕನ್ನು ಹಸ್ತಾಂತರಿಸಿ ಭಾವುಕರಾದರು.
ಕೊಡಗಿನಲ್ಲಿ ಮಳೆಯಿಂದಾಗಿರುವ ಆನಾಹುತಗಳನ್ನು ನೋಡಿದರೆ ಸಂಕಟವಾಗುತ್ತದೆ. ಅಲ್ಲಿನ ಜನಸಾಮಾನ್ಯರು ಪಡುತ್ತಿರುವ ಪರಿಪಾಟಿಲನ್ನು ನನ್ನಿಂದ ನೋಡಲಾಗುತ್ತಿಲ್ಲ ಎಂದು ಕಣ್ಣೀರು ಹಾಕಿದರು.
ನನ್ನ ಕೈಯಲ್ಲಿ ಸಾಧ್ಯವಾದಷ್ಟನ್ನು ನಾನು ಸಹಾಯ ಮಾಡಿದ್ದೇನೆ. ನನ್ನ ಮಗ ಅಮೆರಿಕದಲ್ಲಿ ಸಾಫ್ಟ್‍ವೇರ್ ಎಂಜನಿಯರ್ ಆಗಿದ್ದು, ಅವರೂ ಕೂಡ ಒಂದಿಷ್ಟು ಹಣ ಕೊಡುವುದಾಗಿ ಹೇಳಿದ್ದಾರೆ. ಮುಂದಿನ ವಾರ ಅದನ್ನೂ ಮುಖ್ಯಮಂತ್ರಿಯವರಿಗೆ ತಲುಪಿಸುತ್ತೆನೆ. ಸಾರ್ವಜನಿಕರು ಕೊಡಗಿನ ಕಷ್ಟಕ್ಕೆ ಸ್ಪಂದಿಸಬೇಕು. ನಮ್ಮ ಕೈಲಾದ ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.
ಅರಣ್ಯ ಇಲಾಖೆಯಲ್ಲಿ ಫಾರೆಸ್ಟ್‍ರ್ ಆಗಿ ಸೇವೆ ಸಲ್ಲಿಸಿದ್ದ ಮೂಲತಃ ಕೋಲಾರದವರಾದ ವೆಂಕಟರಾಮಯ್ಯ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ