ಕೊಡಗು; ಮಳೆಹಾನಿಯಿಂದ ಉಂಟಾಗಿರುವ ನಷ್ಟವನ್ನು ಅಂದಾಜಿಸಿದ ಬಳಿಕ ಕೇಂದ್ರ ಸರಕಾರದಿಂದ ಧನಸಹಾಯಕ್ಕೆ ಮನವಿ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.
ಕೊಡಗು, ಮಡಿಕೇರಿ, ಕುಶಾಲನಗರಕ್ಕೆ ಸೋಮವಾರ ಭೇಟಿ ನೀಡಿದ ಅವರು, ಅಲ್ಲಿನ ಪರಿಸ್ಥಿತಿ ವೀಕ್ಷಿಸಿ, ಸಂತ್ರಸ್ತರ ನೋವು ಆಲಿಸಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಕೇಂದ್ರ ಸರಕಾರ ಕೇರಳಕ್ಕೆ ೫೦೦ ಕೋಟಿ ರು. ನೀಡಿದಂತೆ ಕೊಡಗಿಗೂ ಸಹಾಯ ಧನ ನೀಡಬೇಕು. ಮೊದಲು ಇಲ್ಲಿನ ಆಸ್ತಿ, ಬೆಳೆ, ರಸ್ತೆ ಸೇರಿದಂತೆ ಎಲ್ಲ ನಷ್ಟವನ್ನು ಅಂದಾಜಿಸಿ ವರದಿ ಪಡೆದ ಬಳಿಕ ಕೇಂದ್ರಕ್ಕೆ ಹಣದ ನೆರವಿಗೆ ಮನವಿ ಮಾಡಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರು ಕೊಡಗಿನ ವೈಮಾನಿಕ ಸಮೀಕ್ಷೆ ನಡೆಸಬೇಕು ಎಂದು ಹೇಳಿದರು.
ಕೊಡಗಿನಲ್ಲಿ ಹಿಂದೆಂದಿಗಿಂತಲೂ ಈ ಬಾರಿ ಹೆಚ್ಚು ಮಳೆಯಾದ್ದರಿಂದ ಈ ಭಾಗ ಸಂಪೂರ್ಣ ಹಾನಿಗೊಳಲಾಗಿದೆ. ೫೦ ಸಾವಿರ ಜನ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ದು, ೫ ಸಾವಿರ ಜನರನ್ನು ಸಂತ್ರಸ್ತ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ. ಸಾಕಷ್ಟು ಮನೆಗಳು ಕೊಚ್ಚಿ ಹೋಗಿವೆ. ರಸ್ತೆ ಸಂಪರ್ಕ ಕೂಡ ಕಡಿತಗೊಂಡಿದೆ.
ರಾಜ್ಯ ಸರಕಾರ ನೆರೆ ನಿರಾಶ್ರಿತ ನೆರವಿಗೆ ಧಾವಿಸಿದೆ. ಸಿಎಂ, ಕಂದಾಯ ಸಚಿವರು ಸೇರಿದಂತೆ ಹಲವು ಸಚುವರುಗಳು ಇಲ್ಲಿನ ಪರಿಸ್ಥಿತಿ ಅವಲೋಕಿಸಿ, ಇಲ್ಲಿಯೇ ಬೀಡುಬಿಟ್ಟಿದ್ದಾರೆ.
ಮತ್ತೊಂದೆಡೆ ರಾಜ್ಯಾದ್ಯಂತ ಸಾರ್ವಜನಿಕರು ಇವರ ಕಷ್ಟಕ್ಕೆ ನೆರವಾಗಿ, ಆಹಾರ, ಇತರೆ ಸಾಮಾಗ್ರಿಗಳು ಸೇರಿದಂತೆ ಎಲ್ಲರೀತಿಯ ಸಹಾಯಹಸ್ತ ಚಾಚುತ್ತಿದ್ದಾರೆ.
ಇದುವರೆಗು ಒಟ್ಟು ೭ ಜನ ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ. ಕೆಲವರು ಕಾಣೆಯಾಗಿದ್ದಾರೆ. ಇವರ ಹುಡುಕಾಟ ನಡೆಯುತ್ತಿದೆ. ಮನೆ ಕಳೆದುಕೊಂಡವರಿಗೆ ಸರಕಾರದಿಂದಲೇ ಮನೆ ನಿರ್ಮಿಸಿಕೊಡಲು ತೀರ್ಮಾನಿಸಿದ್ದು, ಪ್ರೀ ಫ್ಯಾಬ್ರಿಕ್ ಮನೆ ನಿರ್ಮಿಸಲು ಚಿಂತಿಸಲಾಗಿದೆ. ಕೆಲವರ ಮನೆ ಇದ್ದ ಜಾಗವೂ ಗುರುತಿಸಲು ಸಾಧ್ಯವಾಗದ ರೀತಿ ಹಾಳಾಗಿದೆ. ಅಂಥವರಿಗೆ ಸರಕಾರದ ಜಾಗದಲ್ಲಿಯೇ ಮನೆ ನಿರ್ಮಿಸಿ ಕೊಡಲಾಗುತ್ತದೆ ಎಂದರು.
ಆಹಾರ ಸಾಮಾಗ್ರಿಗಳನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿರುವ ಬಗ್ಗೆ ನಮಗೂ ದೂರು ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸುವಂತೆ ಎಸ್‌ಪಿ ಅವರಿಗೆ ಸೂಚನೆ ನೀಡಿರುವುದಾಗಿ ಹೇಳಿದರು.