ಪಾಕ್ ಭೇಟಿಗೆ ನವಜೋತ್ ಸಿಂಗ್ ಸಿಧು ನೀಡಿದ ಹೇಳಿಕೆಯೇನು…?

ಅಮೃತಸರ:ಆ-೨೧: ಪಾಕ್ ನೂತನ ಪ್ರಧಾನಿಇಮ್ರಾನ್‌ ಖಾನ್‌ ಪ್ರಮಾಣ ವಚನ ಸಮಾರಂಭಕ್ಕೆ ಹಾಜರಾಗಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದ ಪಂಜಾಬ್‌ ಸಚಿವ ನವಜೋತ್‌ ಸಿಂಗ್‌ ಸಿಧು, ‘ನನಗೆ ಹೀಗೆ ಮಾಡು ಎಂದು ಯಾರೂ ಹೇಳಿರಲಿಲ್ಲ. ನನ್ನ ಆತ್ಮಸಾಕ್ಷಿಯ ಪ್ರಕಾರ ನಾನು ನಡೆದುಕೊಂಡಿದ್ದೇನೆ’ ಎಂದು ಸಮರ್ಥಿಸಿಕೊಂಡಿದ್ದಾರೆ.

ಪಾಕ್‌ ಸೇನಾ ಮುಖ್ಯಸ್ಥ ಜನರಲ್‌ ಬಾಜ್ವಾರನ್ನು ಅಪ್ಪಿಕೊಂಡುದಕ್ಕೆ ಸ್ಪಷ್ಟನೆ ನೀಡಿದ ಸಿಧು ‘ನಾನು ಕುಳಿತಿದ್ದಲ್ಲಿ ಬಾಜ್ವಾ ಅವರು ಬಂದರು. ಸ್ವಾಭಾವಿಕವಾಗಿ ಎದ್ದು ನಿಂತು ಗೌರವಿಸಿದೆ. ಆ ಬಳಿಕ ನಮ್ಮಿಬ್ಬರ ನಡುವೆ ಯಾವುದೇ ಮಾತುಕತೆ ನಡೆದಿಲ್ಲ’ ಎಂದರು.

‘ದಿನ ನಿತ್ಯ ಭಾರತದ ಹಲವಾರು ಮಂದಿ ಪಾಕ್‌ಗೆ ತೆರಳುತ್ತಾರೆ. ನನಗೆ ಪಾಕ್‌ ಪತ್ರಕರ್ತರು, ರಾಜಕಾರಣಿಗಳು ಮತ್ತು ಜನರು ಅಪಾರ ಪ್ರೀತಿ ತೋರಿದರು’ ಎಂದರು.

‘ಹಿಂದೆಯೂ ಉಭಯ ರಾಷ್ಟ್ರಗಳ ನಡುವೆ ಶಾಂತಿ ಮೂಡಿಸುವ ಯತ್ನಗಳು ನಡೆದಿದ್ದವು. ಮಾಜಿ ಪ್ರಧಾನಿ ದಿವಂಗತ ವಾಜಪೇಯಿ, ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೆ ಪಾಕ್‌ಗೆ ಭೇಟಿ ನೀಡಿರಲಿಲ್ಲವೆ’ ಎಂದು ಪ್ರಶ್ನಿಸಿದರು.

‘ಹಿಂದೆ ದೋಸ್ತಿ ಬಸ್‌ ಸಂಚರಿಸುತ್ತಿತ್ತು, ಪ್ರಧಾನಿ ಮೋದಿ ಅವರು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ನವಾಜ್‌ ಷರೀಫ್ ಅವರನ್ನು ಆಹ್ವಾನಿಸಿರಲಿಲ್ಲವೆ? ಮೋದಿ ಅವರು ತುರ್ತಾಗಿ ಲಾಹೋರ್‌ಗೆ ತೆರಳಿರಲಿಲ್ಲವೆ…?
‘ಶಾಂತಿ ಮತ್ತು ಸ್ಥಿರತೆಗೆ ಉತ್ತಮ ಸಂದೇಶಗಳು ಅಗತ್ಯವಾಗಿದ್ದು , ಆಗ ಮಾತ್ರ ನಮ್ಮ ಸೈನಿಕರು ಹುತಾತ್ಮರಾಗುವುದನ್ನು ತಡೆಯಬಹುದು’ಎಂದು ಸಿಧು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಸಿಧು ನಡೆಗೆ ಪಂಜಾಬ್‌ ಸಿಎಂ ಕ್ಯಾ. ಅಮರಿಂದರ್‌ ಸಿಂಗ್‌ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ನಡುವೆ ಪಾಕಿಸ್ತಾನ ಪ್ರಧಾನಿಯಾಗಿ ಇಮ್ರಾನ್‌ ಖಾನ್‌ ಸಿಧು ಬೆಂಬಲಕ್ಕೆ ನಿಂತಿದ್ದು ಅವರು ‘ಶಾಂತಿಯ ದೂತ’ ಎಂದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ