ಹುಬ್ಬಳ್ಳಿ: ಪ್ರತಿವರ್ಷದಂತೆ ಈ ವರ್ಷವೂ ಕೂಡ ಶಾಂತಿ ಹಾಗೂ ಸೌಹಾರ್ದತೆಯ ಮೂಲಕ ಗಣೇಶೋತ್ಸವ ಆಚರಣೆ ಮಾಡಬೇಕು ಅಲ್ಲದೇ ಪರಿಸ್ನೇಹಿ ಗಣಪತಿ ಬಳಕೆ ಮಾಡುವ ಮೂಲಕ ಆಚರಣೆ ಮಾಡಬೇಕು ಈ ಹಿನ್ನೆಲೆಯಲ್ಲಿ ಸಿಂಗಲ್ ವಿಂಡೋ ವ್ಯವಸ್ಥೆ ಜಾರಿಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ದೀಪಾ ತಿಳಿಸಿದರು.
ನಗರದಲ್ಲಿಂದು ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಧಾರವಾಡ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ, ಮೂರ್ತಿ ತಯಾರಕರ ಹಾಗೂ ಅಧಿಕಾರಿಗಳ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಿಓಪಿ ಹಾಗೂ ರಾಸಾಯನಿಕ ಬಣ್ಣ ಬಳಕೆಯ ಗಣಪತಿ ಮೂರ್ತಿಗಳ ಬಳಕೆಯನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ ಈ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯಲ್ಲಿಯೂ ಕೂಡ ಈ ಕ್ರಮವನ್ನು ಜಾರಿಗೊಳಿಸಲಾಗಿದೆ ಎಂದರು.
ಪರಿಸರ ಸಂರಕ್ಷಣೆ ಹೊಣೆ ಸರ್ಕಾರಕ್ಕೆ ಹಾಗೂ ಅಧಿಕಾರ ವರ್ಗಕ್ಕೆ ಮಾತ್ರವಲ್ಲದೇ ಪ್ರತಿಯೊಬ್ಬ ನಾಗರಿಕರಿಗೂ ಕೂಡ ಜವಾಬ್ದಾರಿ ಬೇಕು ಈ ಹಿನ್ನೆಲೆಯಲ್ಲಿ ಈ ಬಾರಿ ಕಟ್ಟು ನಿಟ್ಟಿನ ಕ್ರಮ ಜಾರಿಗೊಳಿಸಲಾಗಿದೆ ಎಂದರು.
ಅಲ್ಲದೇ ಗಣಪತಿ ಪ್ರತಿಷ್ಟಾಪನೆಗೆ ಪೋಲಿಸ್ ಹಾಗೂ ಹೆಸ್ಕಾಂ ಅಷ್ಟೇಅಲ್ಲದೇ ಮಹಾನಗರ ಪಾಲಿಕೆಯ ಪರವಾನಿಗೆ ಪಡೆಯುವುದು ಅನಿವಾರ್ಯವಾಗಿದೆ ಈ ಹಿನ್ನೆಲೆಯಲ್ಲಿ ಸಿಂಗಲ್ ವಿಂಡೋ ವ್ಯವಸ್ಥೆ ಜಾರಿ ಮಾಡಲಾಗಿದೆ ಇದು ಗಜಾನನ ಮಹಾಮಂಡಳಿಗೆ ಹಾಗೂ ತಯಾರಕರಿಗೆ ಅನುಕೂಲವಾಗಿದೆ ಎಂದರು.
ಬಳಿಕ ಮಾತನಾಡಿದ ಮೋಹನ ಲಿಂಬಿಕಾಯಿ ಅವರು, ಪ್ಲಾಸ್ಟರ್ ಗಣಪತಿಯನ್ನು ನಿಯಂತ್ರಣ ಮಾಡಲು ಜಿಲ್ಲಾಡಳಿತ ಕೈಗೊಂಡಿರುವ ಕ್ರಮ ಸ್ವಾಗತಾರ್ಹವಾಗಿದೆ ಅಲ್ಲದೇ ಬೇರೆ ಕಡೆಗಳಿಂದ ನಗರಕ್ಕೆ ಆಗಮಿಸುತ್ತಿರುವ ಪಿವಿಪಿ ಮೂರ್ತಿಗಳನ್ನು ಮಟ್ಟಹಾಕಲು ಸೂಕ್ತ ಕ್ರಮಜಾರಿಗೊಳಿಸಬೇಕು ಎಂದರು. ಗಣಪತಿ ಆಚರಣೆ ಶಾಂತಿಯುತವಾಗಿ ಶಬ್ಧಮಾಲಿನ್ಯ, ಪರಿಸರ ಮಾಲಿನ್ಯ ಮಾಡದಂತೆ ಆಚರಣೆ ಮಾಡಬೇಕು ಎಂದರು.
ಈ ಸಭೆಯಲ್ಲಿ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ,ಡಿಸಿಪಿ ರೇಣುಕಾ ಸುಕುಮಾರ, ಮೇಯರ್ ಸುದೀರ ಸರಾಫ್, ಉಪಮೇಯರ್ ಮೇನಕಾ ಹುರಳಿ, ಪಾಲಿಕೆ ಆಯುಕ್ತ ಶಕೀಲ ಅಹ್ಮದ, ಪಾಲಿಕೆ ಸದಸ್ಯ ಗಣೇಶ ಟಗರಗುಂಟೆ ಸೇರಿದಂತೆ ಗಜಾನನೋತ್ಸವ ಮಹಾಮಂಡಳಿ ಪದಾಧಿಕಾರಿಗಳು ಹಾಗೂ ಮೂರ್ತಿ ತಯಾರಕ ಸದಸ್ಯರು ಪಾಲ್ಗೊಂಡಿದ್ದರು.