ಬೆಂಗಳೂರು, ಆ.20- ಆರ್ಎಸ್ಎಸ್, ಬಿಜೆಪಿ ಭಯೋತ್ಪಾದಕ ಸಂಘಟನೆಗಳು ಎನ್ನುವುದರಲ್ಲಿ ಬೇರೆ ದಾರಿಯೇ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಇಂದಿಲ್ಲಿ ಹೇಳಿದರು.
ರಾಜೀವ್ಗಾಂಧಿ, ದೇವರಾಜಅರಸು ಅವರ ಜನ್ಮ ದಿನಾಚರಣೆ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪತ್ರಕರ್ತೆ ಗೌರಿಲಂಕೇಶ್, ವಿಚಾರವಾದಿ ಪನ್ಸಾರೆ ಹತ್ಯೆ ಪ್ರಕರಣಗಳಲ್ಲಿ ಸನಾತನ ಧರ್ಮದ ಸಂಘಟನೆಗಳ ಕೈವಾಡ ಇರುವ ಬಗ್ಗೆ ರಾಜ್ಯ ಪೆÇಲೀಸರು ಇಂಚಿಂಚು ತನಿಖೆ ಮಾಡಿದ್ದಾರೆ. ಪನ್ಸಾರೆ ಹತ್ಯೆ ಬಗ್ಗೆಯೂ ಕೂಡ ಮಹತ್ವದ ಸುಳಿವು ಸಿಕ್ಕಿದೆ ಎಂದರು.
ಐಸೀಸ್ ಸಂಘಟನೆಗಳು ಈ ರೀತಿ ಹತ್ಯೆ ಮಾಡಿದ್ದರೆ ಬಿಜೆಪಿ, ಆರ್ಎಸ್ಎಸ್ನವರು ಭಾರೀ ಪ್ರತಿಭಟನೆ ಮಾಡುತ್ತಿದ್ದರು. ಮಾಧ್ಯಮಗಳು ನಿರಂತರ ವರದಿ ಮಾಡುತ್ತಿದ್ದವು. ಆದರೆ, ಬಲಪಂಥೀಯ ಸಂಘಟನೆಗಳವರು ಈ ಪ್ರಕರಣದಲ್ಲಿರುವುದರಿಂದ ದನಿ ಎತ್ತುತ್ತಿಲ್ಲ ಎಂದು ದಿನೇಶ್ ಗುಂಡೂರಾವ್ ಬೇಸರ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ರಾಜೀವ್ಗಾಂಧಿ, ದೇವರಾಜ ಅರಸು ಅವರು ಸರ್ವರಿಗೂ ಸಮಪಾಲು, ಸಮಬಾಳು ಕಲ್ಪಿಸಿಕೊಟ್ಟವರು. ಮಹಿಳೆಯವರಿಗೆ ಮೀಸಲಾತಿ ದೊರಕಿಸಿಕೊಟ್ಟವರು. ಗ್ರಾಮ ಪಂಚಾಯ್ತಿಯಲ್ಲಿ ಮಹಿಳೆಯರಿಗೆ ಮೀಸಲಾತಿ ಕೊಟ್ಟವರು. ಈಗ ಅದರ ಫಲವನ್ನು ಬೇರೆಯವರು ಅನುಭವಿಸುತ್ತಿದ್ದಾರೆ. ಬಿಜೆಪಿಯವರು ಭಾಷಣ ಶೂರರು, ಸಾಮಾಜಿಕ ನ್ಯಾಯಾದ ವಿರೋಧಿಗಳು ಎಂದು ಆರೋಪಿಸಿದರು.
ಮಂಡಲ್ ವರದಿ ಜಾರಿ ಸಂದರ್ಭದಲ್ಲಿ ಅದರ ದಾರಿ ತಪ್ಪಿಸಲು ಅಡ್ವಾಣಿ ರಥಯಾತ್ರೆ ಕೈಗೊಂಡಿದ್ದರು. ಮಹಿಳಾ ಮೀಸಲಾತಿ ವಿರೋಧಿಗಳು ಎಂದು ಹೇಳಿದರು.
ಹಿಂದುಳಿದ ವರ್ಗಗಳ ಮೀಸಲಾತಿಯನ್ನು ರಾಜ್ಯಸಭಾ ಸದಸ್ಯರಾಗಿದ್ದ ರಾಮಜೋಹಿಷ್ ಅವರು ವಿರೋಧಿಸಿ ಕಾನೂನು ಹೋರಾಟ ನಡೆಸಿದ್ದರು ಎಂದು ತಿಳಿಸಿದರು.
ಸಂಸದರಾದ ವೀರಪ್ಪಮೊಯ್ಲಿ, ವೀರಣ್ಣ ಮತ್ತೀಕಟ್ಟಿ, ಶಾಸಕ ಬೈರತಿ ಬಸವರಾಜ್, ಎ.ಆರ್.ಸುದರ್ಶನ್, ಪೆÇ್ರ.ರಾಧಾಕೃಷ್ಣ ಸೇರಿದಂತೆ ಅನೇಕ ಮುಖಂಡರು ಈ ಸಂದರ್ಭದಲ್ಲಿದ್ದರು.