ನವದೆಹಲಿ:ಆ-20: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಆರೋಪಿ, ನೀರವ್ ಮೋದಿ ತಮ್ಮ ದೇಶದಲ್ಲೇ ನೆಲೆಸಿದ್ದಾನೆ ಎಂದು ಬ್ರಿಟನ್ ದೃಢಪಡಿಸಿದೆ.
ಈ ಹಿನ್ನಲೆಯಲ್ಲಿ ಸಿಬಿಐ ನೀರವ್ನನ್ನು ಗಡಿಪಾರು ಮಾಡುವಂತೆ ಬ್ರಿಟನ್ಗೆ ಮನವಿ ಸಲ್ಲಿಸಲು ಸಿದ್ಧತೆ ಆರಂಭಿಸಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ಬೆಳಕಿಗೆ ಬರುತ್ತಿದ್ದಂತೆ ಜಾರಿ ನಿರ್ದೇಶನಾಲಯ ನೀರವ್ ಮೋದಿ ಮತ್ತು ಆತನ ಸಂಬಂಧಿ ಮೆಹುಲ್ ಚೋಕ್ಸಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಇವರಿಬ್ಬರ ವಿರುದ್ಧ ಜಾರಿ ನಿರ್ದೇಶನಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದೆ. ಜತೆಗೆ ಇಂಟರ್ಪೋಲ್ ಸಹ ನೀರವ್ ಮೋದಿ ಬಂಧನಕ್ಕೆ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ.