ಸ್ಥಳೀಯ ಸಂಸ್ಥೆ ಚುನಾವಣೆಗೆ ಅನಿಶ್ಚಿತತೆಯ ಕಾರ್ಮೋಡ

 

ಬೆಂಗಳೂರು,ಆ.19-ಆಡಳಿತ ಮತ್ತು ಪ್ರತಿಪಕ್ಷಗಳಿಗೆ ಸವಾಲಾಗಿ ಪರಿಣಮಿಸಿರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಈ ಬಾರಿ ಪ್ರವಾಹದಿಂದ ಅನಿಶ್ಚಿತತೆಯ ಕಾರ್ಮೋಡ ಆವರಿಸಿದೆ.
ರಾಜ್ಯದ ಮಲೆನಾಡು, ಮಡಿಕೇರಿ, ಕರಾವಳಿ, ಮಧ್ಯ ಕರ್ನಾಟಕ, ಮುಂಬೈ ಕರ್ನಾಟಕ ಸೇರಿದಂತೆ ಅನೇಕ ಕಡೆ ಈ ಬಾರಿ ನಿರೀಕ್ಷೆಗೂ ಮೀರಿದ ಮಳೆಯಾಗಿ ಪ್ರವಾಹ ಉಂಟಾಗಿದ್ದರಿಂದ ಸ್ಥಳೀಯ ಸಂಸ್ಥೆ ಚುನಾವಣೆ ಮೇಲೆ ಯಾರೊಬ್ಬರಿಗೂ ಆಸಕ್ತಿಯೇ ಇಲ್ಲದಂತಾಗಿದೆ.
ಈಗಾಗಲೇ ಮಡಿಕೇರಿ, ವಿರಾಜಪೇಟೆ ಹಾಗೂ ಸೋಮವಾರಪೇಟೆಯ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಪ್ರವಾಹದ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ.
ಇದೇ ಪರಿಸ್ಥಿತಿ ರಾಜ್ಯದ ನಾನಾ ಭಾಗಗಳಲ್ಲಿ ಇರುವುದರಿಂದ ಅಭ್ಯರ್ಥಿಗಳಿಗಾಗಲಿ ಇಲ್ಲವೇ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರಿಗೆ ಚುನಾವಣೆ ಬಗ್ಗೆ ಆಸಕ್ತಿಯೇ ಇಲ್ಲದಂತಾಗಿದೆ.

ರಾಜ್ಯದ 10 ಮಹಾನಗರ ಪಾಲಿಕೆಗಳು, ನಗರಸಭೆ, ಪಟ್ಟಣ ಪಂಚಾಯ್ತಿ ಹಾಗೂ ಪುರಸಭೆಗಳಿಗೆ ಇದೇ 29ರಂದು ಮತದಾನ ನಡೆದು ಸೆ.1ರಂದು ಫಲಿತಾಂಶ ಹೊರಬೀಳಲಿದೆ.
ಮತದಾನಕ್ಕೆ ಕೇವಲ 11 ದಿನ ಬಾಕಿ ಇದ್ದರೂ ಯಾವುದೇ ಪಕ್ಷಗಳಲ್ಲೂ ಚುನಾವಣೆಯ ಆಸಕ್ತಿ ಕಂಡುಬರುತ್ತಿಲ್ಲ. ಆಡಳಿತಾರೂಢ ಕಾಂಗ್ರೆಸ್, ಜೆಡಿಎಸ್ ಹಾಗೂ ಪ್ರತಿಪಕ್ಷ ಬಿಜೆಪಿ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದೆಯಾದರೂ ಪ್ರವಾಹದ ಪರಿಸ್ಥಿತಿಯಲ್ಲಿ ಮತ ಹೇಗೆ ಕೇಳುವುದೆಂಬ ಜಿಜ್ಞಾಸೆ ಎದುರಾಗಿದೆ.
ಮಡಿಕೇರಿ, ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಕಾರವಾರ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಬೆಳಗಾವಿ ಸೇರಿದಂತೆ ಅನೇಕ ಕಡೆ ಈ ಬಾರಿ ಹೆಚ್ಚಿನ ಮಳೆಯಾಗಿ ಅನೇಕರು ಪ್ರಾಣವನ್ನು ಕಳೆದುಕೊಂಡಿದ್ದಾರೆ.
ಬೆಳೆದು ನಿಂತ ಬೆಳೆ, ಮನೆ, ಜಾನುವಾರು, ಆಸ್ತಿಪಾಸ್ತಿ ನಷ್ಟವಾಗಿ ಜನರ ಬದುಕೇ ದುಸ್ತರವಾಗಿದೆ. ಇಂಥ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಬಂದಿರುವುದು ಅಭ್ಯರ್ಥಿಗಳಿಗೆ ಬಿಸಿ ಮುಟ್ಟುವಂತೆ ಮಾಡಿದೆ.
ಮತ ಕೇಳಲು ಮೀನಾಮೇಷ:
ಈಗಾಗಲೇ ಅನೇಕ ಕಡೆ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಆದರೆ ಕಣದಲ್ಲಿರುವ ಅಭ್ಯರ್ಥಿಗಳಿಗೆ ಮತದಾರರ ಬಳಿ ಹೋಗಿ ಮತ ಕೇಳುವುದೇ ಸವಾಲಾಗಿದೆ. ಸಚಿವರು, ಶಾಸಕರು, ಸಂಸದರು, ಜಿಲ್ಲಾ, ತಾಲ್ಲೂಕು ಪಂಚಾಯ್ತಿ ಸದಸ್ಯರು ಪ್ರಚಾರಕ್ಕೆ ಧುಮುಕಿದ್ದರೂ ಬಹಿರಂಗವಾಗಿ ಪ್ರಚಾರ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

ಜನಪ್ರತಿನಿಧಿಗಳಿಗೆ ಮಂಗಳಾರತಿ ಭೀತಿ:
ಜನರು ಮನೆಮಠ, ಆಸ್ತಿಪಾಸ್ತಿ, ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿರುವಾಗ ಪರಿಹಾರ ಒದಗಿಸಬೇಕಾಗಿರುವುದು ಜನಪ್ರತಿನಿಧಿಗಳ ಕರ್ತವ್ಯ. ಜನರು ದೈನಂದಿನ ಜೀವನ ನಡೆಸಲು ದುಸ್ಸಾಹಸ ಪಡುತ್ತಿರುವಾಗ ಮತ ಕೇಳಲು ಹೋದರೆ ಮುಖಕ್ಕೆ ಮಂಗಳಾರತಿ ಮಾಡಬಹುದೆಂಬ ಭೀತಿ ಕಾಡುತ್ತಿದೆ.
ಹೀಗಾಗಿ ಈ ಬಾರಿಯ ಸ್ಥಳೀಯ ಸಂಸ್ಥೆ ಚುನಾವಣೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರವಾಹ ಪೀಡಿತ ಜಿಲ್ಲೆಗಳ ಉಸ್ತುವಾರಿ ಸಚಿವರು ಚುನಾವಣೆ ಕಡೆ ಗಮನಕೊಡದೆ ಪ್ರವಾಹಪೀಡಿತ ಪ್ರದೇಶಗಳಲ್ಲಿ ಮೊಕ್ಕಾಂ ಹೂಡಿ ಪರಿಸ್ಥಿತಿ ಅವಲೋಕಿಸುವಂತೆ ಸೂಚಿಸಿದ್ದಾರೆ.
ಅದರಲ್ಲೂ ಹೆಚ್ಚಿನ ಹಾನಿಗೊಳಗಾಗಿರುವ ಮಡಿಕೇರಿ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಪರಿಸ್ಥಿತಿ ಹತೋಟಿಗೆ ಬರುವವರೆಗೂ ಜಿಲ್ಲೆ ಬಿಟ್ಟು ಕದಲಬಾರದೆಂದು ಮುಖ್ಯಮಂತ್ರಿ ಕಟ್ಟಪ್ಪಣೆ ವಿಧಿಸಿದ್ದಾರೆ.
ಮುಖ್ಯಮಂತ್ರಿಗಳ ಸೂಚನೆ ಹಿನ್ನೆಲೆಯಲ್ಲಿ ಮೂವರು ಸಚಿವರು ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲೇ ವಾಸ್ತವ್ಯ ಹೂಡಿದ್ದಾರೆ. ಇದೇ ರೀತಿ ಚಿಕ್ಕಮಗಳೂರಿನಲ್ಲಿ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್, ಶಿವಮೊಗ್ಗದಲ್ಲಿ ಡಿ.ಸಿ.ತಮಣ್ಣ, ದಕ್ಷಿಣಕನ್ನಡದಲ್ಲಿ ಯು.ಟಿ.ಖಾದರ್, ಉಡುಪಿಯಲ್ಲಿ ಜಯಮಾಲ ಸೇರಿದಂತೆ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಚಿವರು ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ.
ರಾಜ್ಯದಲ್ಲಿ ಒಂದೆಡೆ ಪ್ರವಾಹ ಉಂಟಾಗಿ ಜನರು ಕುಡಿಯುವ ನೀರು, ತಿನ್ನುವ ಆಹಾರಕ್ಕೂ ಪರದಾಡುತ್ತಿದ್ದಾರೆ. ಹೀಗಾಗಿ ಈ ಬಾರಿ ಸ್ಥಳೀಯ ಸಂಸ್ಥೆ ಚುನಾವಣೆ ಯಾರಿಗೂ ಬೇಡವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ