2,000ಕ್ಕೂ ಅಧಿಕ ಮಕ್ಕಳ ಆರೈಕೆ ಕೇಂದ್ರಗಳಿಗೆ ಬೀಗ ಮುದ್ರೆ ಎಚ್ಚರಿಕೆ

ನವದೆಹಲಿ: ಆ.19-ಕೇಂದ್ರ ಸರ್ಕಾರದ ಪುನರಾವರ್ತಿತ ಸೂಚನೆಗಳ ನಡುವೆಯೂ ನೋಂದಣಿಯಾಗದಿರುವ ದೇಶದ 2,000ಕ್ಕೂ ಅಧಿಕ ಮಕ್ಕಳ ಆರೈಕೆ ಕೇಂದ್ರಗಳಿಗೆ(ಸಿಸಿಐಗಳು) ಬೀಗ ಮುದ್ರೆ ಜಡಿಯುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವಾಲಯ ಎಚ್ಚರಿಕೆ ನೀಡಿದೆ.

ಜಾರ್ಖಂಡ್ ಸೇರಿದಂತೆ ದೇಶದ ಕೆಲವೆಡೆ ಇಂಥ ಕೇಂದ್ರಗಳಿಂದ ಮಕ್ಕಳ ಮಾರಾಟ ಮತ್ತು ಅಕ್ರಮ ದತ್ತು ನೀಡಿಕೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವ ಮನೇಕಾ ಗಾಂಧಿ ಎಲ್ಲಾ ಸಿಸಿಐಗಳು ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರ(ಕಾರಾ)ದಲ್ಲಿ ಕಡ್ಡಾಯವಾಗಿ ನೋಂದಣಿಯಾಗಲು ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿ ಒಂದು ತಿಂಗಳು ಗಡುವು ನೀಡಿದ್ದರು.

ಆದರೆ ಗಡುವು ಮುಗಿದು, ಪುನಾವರ್ತಿತ ಸೂಚನೆಗಳನ್ನೂ ನೀಡಿದ್ದರೂ, ದೇಶದ ವಿವಿಧ ರಾಜ್ಯಗಳ 2,000ಕ್ಕೂ ಹೆಚ್ಚು ಸಿಸಿಐಗಳು ನೋಂದಣಿಗೆ ಒಳಪಟ್ಟಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವಾಲಯವು ಅವುಗಳಿಗೆ ಬೀಗಮುದ್ರೆ ಜಡಿಯಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂಥ ಸಿಸಿಐಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನದಿಂದಾಗಿ ನೂರಾರು ಮಕ್ಕಳು ಮತ್ತು ಪ್ರಾಮಾಣಿಕ ಸಿಬ್ಬಂದಿ ಸಂಕಷ್ಟದ ಅತಂತ್ರ ಸ್ಥಿತಿ ಅನುಭವಿಸುವ ಸಾಧ್ಯತೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ