ಚಿಕ್ಕಮಗಳೂರು/ಮಂಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದು, 5 ಕಿ.ಮೀ ವರೆಗೂ ವಾಹನಗಳು ಸಾಲು ಗಟ್ಟಿ ನಿಂತಿದೆ.
ಲಾರಿ ಕೆಟ್ಟು ನಿಂತಿದರಿಂದ ಟ್ರಾಫಿಕ್ ಜಾಮ್ ಆಗಿದ್ದು, ಕೊಟ್ಟಿಗೆಹಾರದ ಬಳಿ ವಾಹನಗಳು ವಾಪಸ್ ತೆರಳುತ್ತಿದೆ. ಮಂಗಳೂರು-ಧರ್ಮಸ್ಥಳ ತೆರಳುವ ಪ್ರಯಾಣಿಕರು ಪರದಾಡುತ್ತಿದ್ದಾರೆ. ಚಾರ್ಮಾಡಿ ಘಾಟಿಯಲ್ಲಿ ಟ್ರಾಫಿಕ್ ಜಾಮ್ ನಿಂದ ಸವಾರರು ಪರದಾಡುತ್ತಿದ್ದಾರೆ.
ಶಿರಾಡಿ, ಸಂಪಾಜೆ ಘಾಟಿ ರಸ್ತೆಗಳು ಬಂದ್ ಆದ ಹಿನ್ನೆಲೆಯಲ್ಲಿ ಪರ್ಯಾಯವಾಗಿ ಎಲ್ಲಾ ವಾಹನಗಳು ಚಾರ್ಮಾಡಿಯಲ್ಲಿ ಸಂಚಾರವಾಗುತ್ತಿದೆ. ಮಂಗಳೂರು, ಧರ್ಮಸ್ಥಳಕ್ಕೆ ಸಾವಿರಾರು ಪ್ರಯಾಣಿಕರು ಸಂಚಾರ ಮಾಡುತ್ತಿದ್ದು, ದಟ್ಟ ಮಂಜು, ತುಂತುರು ಮಳೆಯಿಂದ ಪ್ರಯಾಣಿಕರು ಕಂಗಾಲಾಗಿದ್ದಾರೆ.
ಮಳೆ ಬೀಳುತ್ತಿರುವುದರಿಂದ ಏಕಮುಖ ಸಂಚಾರವೂ ವಿಳಂಬವಾಗುತ್ತಿದೆ. ನೂರಾರು ವಾಹನಗಳು ರಸ್ತೆಯಲ್ಲೇ ಬಾಕಿ ಇದ್ದು, ಮಂಗಳೂರು, ಉಡುಪಿಗೆ ಬರಬೇಕಾದ ಬಸ್ಸುಗಳು 5 ಗಂಟೆ ವಿಳಂಬವಾಗಿದೆ.
ಬೆಂಗಳೂರು- ಮಂಗಳೂರು ನಡುವೆ ಏಕೈಕ ಸಂಪರ್ಕದ ಕೊಂಡಿಯಾಗಿದ್ದ ಚಾರ್ಮಾಡಿ ಘಾಟಿಯಲ್ಲಿ 10ನೇ ತಿರುವಿನಲ್ಲಿ ಶುಕ್ರವಾರ ಕಂಟೈನರ್ ಟ್ರಕ್ ಪಲ್ಟಿಯಾಗಿತ್ತು. ಪಲ್ಟಿಯಾದ ಹಿನ್ನೆಲೆಯಲ್ಲಿ ರಸ್ತೆಯ ಒಂದು ಬದಿಯಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಈಗ ಮತ್ತೆ ಲಾರಿ ಕೆಟ್ಟು ನಿಂತರ ಪರಿಣಾಮ ಮತ್ತೆ ಸಂಚಾರಕ್ಕೆ ಸಮಸ್ಯೆಯಾಗಿದೆ.