ಕೇರಳ ಮತ್ತು ಕೊಡಗಿನ ಮಳೆ ಸಂತ್ರಸ್ತರ ನೆರವಿಗೆ ಬಿಬಿಎಂಪಿ ನೆರವು

 

ಬೆಂಗಳೂರು, ಆ.18- ಕೇರಳ ಮತ್ತು ಕೊಡಗಿನ ಮಳೆ ಸಂತ್ರಸ್ತರ ನೆರವಿಗೆ ದಾವಿಸಲು ಬಿಬಿಎಂಪಿ ಮುಂದಾಗಿದೆ.
ಪಾಲಿಕೆ ಅನುದಾನದಿಂದ ಕೇರಳಕ್ಕೆ ಒಂದು ಕೋಟಿ ಮತ್ತು ಕೊಡಗಿಗೆ ಒಂದು ಕೋಟಿ ನೆರವು ನೀಡುವುದಲ್ಲದೆ ಎಲ್ಲ 198 ಸದಸ್ಯರ ಒಂದು ತಿಂಗಳ ವೇತನವನ್ನು ಗೌರವಧನವಾಗಿ ನೀಡಲು ತೀರ್ಮಾನಿಸಲಾಗಿದೆ.

ಇಷ್ಟೇ ಅಲ್ಲದೆ, ಪಾಲಿಕೆ ಅಧಿಕಾರಿಗಳ ಒಂದು ದಿನದ ವೇತನ ಎಲ್ಲ ಒಟ್ಟು ಸೇರಿ 3.28 ಕೋಟಿ ರೂ.ಗಳಾಗಲಿದ್ದು, ಇದರಲ್ಲಿ ಕೇರಳಕ್ಕೆ ಒಂದು ಕೋಟಿ, ಉಳಿದ 2.28 ಕೋಟಿ ರೂ.ಗಳನ್ನು ಕೊಡಗಿಗೆ ನೀಡಲಾಗುವುದು ಎಂದು ಮೇಯರ್ ಸಂಪತ್‍ರಾಜ್ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು.
ಬಿಬಿಎಂಪಿಯ ಗಾಜಿನ ಮನೆಯಲ್ಲಿ ಒಂದು ಕೌಂಟರ್ ತೆರೆಯಲಾಗುತ್ತದೆ. ಎಲ್ಲ 198 ಸದಸ್ಯರು ಅವರವರ ವಾರ್ಡ್‍ಗಳಲ್ಲಿ ಪಾದಯಾತ್ರೆ ಮಾಡಿ ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸಿ ಈ ಕೌಂಟರ್‍ಗೆ ತಂದುಕೊಡಬೇಕು. ನಂತರ ಇದನ್ನು ಸಂತ್ರಸ್ತರಿಗೆ ರವಾನಿಸುತ್ತೇವೆ ಎಂದು ಹೇಳಿದರು.
ವಿಶೇಷ ಆಯುಕ್ತರಾದ ರಂದೀಪ್ ಮತ್ತು ಮನೋಜ್‍ಕುಮಾರ್ ಮೀನ ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಪರಿಹಾರದ ವಸ್ತುಗಳನ್ನು ಮೈಸೂರಿಗೆ ತಲುಪಿಸುವ ಕೆಲಸವನ್ನು ರಂದೀಪ್ ನೋಡಿಕೊಳ್ಳುತ್ತಾರೆ ಎಂದು ಹೇಳಿದರು.

ಬಿಬಿಎಂಪಿ ವ್ಯಾಪ್ತಿಯ ಡಾಕ್ಟರ್‍ಗಳು, ಎಂಜಿನಿಯರ್‍ಗಳು, ಟೌನ್ ಪ್ಲಾನಿಂಗ್ ಅಧಿಕಾರಿಗಳು, ಪಾಲಿಕೆ ನೌಕರರು ಕೊಡಗಿಗೆ ತೆರಳಿ ಪರಿಹಾರ ಕಾರ್ಯದಲ್ಲಿ ಕೈ ಜೋಡಿಸಲಿದ್ದಾರೆ. ಅಲ್ಲದೆ, ಕ್ರಡಾಯ್ ಸಂಸ್ಥೆ ಅಧಿಕಾರಿಗಳೊಂದಿಗೆ ಟೌನ್ ಪ್ಲಾನಿಂಗ್ ಅಧಿಕಾರಿಗಳು ಮಾತುಕತೆ ನಡೆಸಿ ಕೊಡಗಿನಲ್ಲಿ ಮನೆ ಕಳೆದುಕೊಂಡು ನಿರ್ವಸತಿಗರಾಗಿರುವವರಿಗೆ ತಾತ್ಕಾಲಿಕವಾಗಿ ಶೆಡ್ ನಿರ್ಮಿಸಿಕೊಡಲು ಕ್ರಮ ಕೈಗೊಳ್ಳಲಿದ್ದಾರೆ ಎಂದು ಸಂಪತ್‍ರಾಜ್ ತಿಳಿಸಿದರು.
ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಮಾತನಾಡಿ, ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿದ್ದ ಸಂದರ್ಭದಲ್ಲೇ ನಮ್ಮನಾಯಕ ಆರ್.ಅಶೋಕ್ ಅವರು ನೆರವಿಗೆ ದಾವಿಸುವಂತೆ ಕರೆ ಕೊಟ್ಟಿದ್ದರು. ಇದೀಗ ಮೇಯರ್ ಸಂಪತ್‍ರಾಜ್ ಅವರು ಒಂದು ತಿಂಗಳ ವೇತನ ಕೊಡುವಂತೆ ಹೇಳಿದ್ದಾರೆ. ಪಕ್ಷಾತೀತವಾಗಿ ಇದಕ್ಕೆ ನಾವೆಲ್ಲ ಸ್ಪಂದಿಸಿದ್ದೇವೆ ಎಂದು ಹೇಳಿದರು.

ನಿರ್ವಸತಿಗರಿಗೆ ಸಾಮಗ್ರಿಗಳನ್ನು ಸಂಗ್ರಹಿಸುವ ವೇಳೆ ನಗರದ ನಾಗರಿಕರು ಹಳೆಯ ಬಟ್ಟೆಗಳನ್ನು ನೀಡಬಾರದು. ಹಾಗೆ ಮಾಡಿದರೆÉ ಕೊಡಗಿನ ಜನರಿಗೆ ಮುಜುಗರವಾಗುತ್ತದೆ. ದಯವಿಟ್ಟು ಹೊಸ ಬಟ್ಟೆ ಮತ್ತು ಉತ್ತಮ ಗುಣಮಟ್ಟದ ಆಹಾರ ಪದಾರ್ಥ ನೀಡಬೇಕು ಎಂದು ಮನವಿ ಮಾಡಿದರು.
ಆಡಳಿತ ಪಕ್ಷದ ನಾಯಕ ಶಿವರಾಜ್ ಮಾತನಾಡಿ, ಈ ಹಿಂದೆ ಮಂಗಳೂರಿನಲ್ಲಿ ಸುನಾಮಿಯಾಗಿದ್ದಾಗ ಕೇರಳದವರು, ಕೊಡಗಿನವರು ನೆರವಿಗೆ ದಾವಿಸಿದ್ದರು. ಈಗ ಅವರು ತೊಂದರೆಗೆ ಒಳಗಾಗಿದ್ದಾರೆ. ಅವರಿಗೆ ಸ್ಪಂದಿಸುವುದು ನಮ್ಮೆಲ್ಲರ ಕರ್ತವ್ಯ. ಈಗ 3.28 ಕೋಟಿ ಸಂಗ್ರಹವಾಗಿದೆ. ಇದನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲುಪಿಸುವ ಮೂಲಕ ಸಂತ್ರಸ್ತರಿಗೆ ನೆರವಾಗುತ್ತೇವೆ ಎಂದು ಹೇಳಿದರು.
ಅಧಿಕಾರಿಗಳಲ್ಲಿ ಒಡಕು: ನೆರೆ ಸಂತ್ರಸ್ತರಿಗೆ ನೆರವಾಗಲು ನಿಧಿ ಸಂಗ್ರಹಿಸುವುದರಲ್ಲಿ ಅಧಿಕಾರಿಗಳಲ್ಲಿ ಎರಡು ಬಣಗಳಾಗಿ ಒಡೆದು ಹೋಗಿವೆ. ಒಂದು ಅಮೃತ್‍ರಾಜ್ ಬಣ, ಇನ್ನೊಂದು ಮಾಯಣ್ಣ ಬಣ.

ಅಧಿಕಾರಿಗಳ ಒಂದು ದಿನದ ವೇತನ ಸಂಗ್ರಹದ ಬಗ್ಗೆ ಮೇಯರ್ ಸಂಪತ್‍ರಾಜ್ ಅಮೃತ್‍ರಾಜ್ ಬಣದವರನ್ನು ಕೇಳಿ ತೀರ್ಮಾನ ಕೈಗೊಂಡಿದ್ದರು. ಇದರಿಂದ ಮಾಯಣ್ಣ ಬಣ ಕೋಪಗೊಂಡಿದೆ. ಪತ್ರಿಕಾಗೋಷ್ಠಿ ವೇಳೆ ಇದೇ ವಿಷಯಕ್ಕೆ ಎರಡು ಬಣಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಈ ಸಂದರ್ಭದಲ್ಲಿ ಮೇಯರ್ ಮಧ್ಯ ಪ್ರವೇಶಿಸಿ ಇಷ್ಟವಿದ್ದವರು ಒಂದು ದಿನದ ವೇತನ ನೀಡಿ. ಇಲ್ಲದಿದ್ದರೆ ಬಿಡಿ. ಹಾಗೇನಾದರೂ ಆದರೆ ನಿಮ್ಮ ಹಣವನ್ನು ಮರುಪಾವತಿ ಮಾಡುತ್ತೇವೆ ಎಂದು ಸಮಾಧಾನಪಡಿಸಿದರು.
ಈ ವೇಳೆ ಮಾಯಣ್ಣ ಮಾತನಾಡಿ, ನಾವು 50 ಮೂಟೆ ಅಕ್ಕಿಯನ್ನು ಕೊಡಗಿಗೆ ತೆಗೆದುಕೊಂಡು ಹೋಗಿ ನೆರೆ ಸಂತ್ರಸ್ತರಿಗೆ ನೆರವಾಗುತ್ತೇವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಜೆಡಿಎಸ್ ಗುಂಪಿನ ನಾಯಕಿ ನೇತ್ರಾ ನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ