ಬೆಂಗಳೂರು, ಆ.18- ಚಿಕ್ಕಮಗಳೂರಿನಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ ಕಾಫಿ, ಕಾಳುಮೆಣಸು, ಅಡಿಕೆ ಬೆಳೆ ಸಂಪೂರ್ಣ ನೆಲಕಚ್ಚಿದೆ.
ಹಸಿರುಸೇನೆ, ಮಲೆನಾಡು ಜನಪರ ಒಕ್ಕೂಟ ವೇದಿಕೆ ಕೊಳೆತು ಹೋದ ಅಡಿಕೆ ಬೆಳೆಯನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿ ಪರಿಹಾರಕ್ಕೆ ಆಗ್ರಹಿಸಿತು.
ಹಸಿರು ಸೇನೆ ಅಧ್ಯಕ್ಷ ನವೀನ್ ಕರುವಾನೆ, ಚಿಂತನ್ ಬೆಳಗೋಳ ಹಾಗೂ ಒಕ್ಕೂಟದ ಜಗದೀಶ್ ಕಣದ ಮನೆ, ಸಂತೋಷ್ ಕಾಳ್ಯ ಮತ್ತಿತರರು ಪ್ರತಿಭಟನೆ ನಡೆಸಿ ಮಲೆನಾಡು ಭಾಗದಲ್ಲಿ ಮಳೆಯಿಂದ ಸಂತ್ರಸ್ತರಾದವರ ನೆರವಿಗೆ ಸರ್ಕಾರ ಧಾವಿಸಬೇಕೆಂದು ಆಗ್ರಹಿಸಿದರು.
ಅತಿವೃಷ್ಟಿಯಿಂದ ಅಡಿಕೆ ಬೆಳೆಗಾರರು ಕಂಗಾಲಾಗಿದ್ದು, ಗೋರಕ್‍ಸಿಂಗ್ ವರದಿ ಜಾರಿಗೊಳಿಸಬೇಕು. ಮಲೆನಾಡು ಭಾಗಕ್ಕೆ ಮಾರಕವಾಗಿರುವ ಕಸ್ತೂರಿರಂಗನ್ ವರದಿಯನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು.
ಭಾರೀ ಮಳೆಯಿಂದ ಕೊಪ್ಪ, ಶೃಂಗೇರಿ, ಹೊರನಾಡು, ಕಳಸಾ, ಚಿಕ್ಕಮಗಳೂರು ಸೇರಿದಂತೆ ಮತ್ತಿತರೆಡೆ ಹೊಲ, ಗದ್ದೆಗಳಿಗೆ ನೀರು ನುಗ್ಗಿ ಬೆಳೆ ನಾಶವಾಗಿರುವುದಲ್ಲದೆ, ರಸ್ತೆ, ಸೇತುವೆಗಳು ಕುಸಿದು ಬಿದ್ದಿವೆ.
ಬೆಳೆ ಹಾನಿ ಸಂಬಂಧ ಸರ್ಕಾರ ಕೂಡಲೇ ಪರಿಹಾರ ನೀಡಬೇಕು. ರಸ್ತೆ, ಸೇತುವೆಗಳನ್ನು ಸರಿಪಡಿಸಿ ಜನರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿದರು.
ಸ್ಥಳಕ್ಕೆ ಆಗಮಿಸಿದ ಶಾಸಕ ಟಿ.ಡಿ.ರಾಜೇಗೌಡ ಅವರು ಪ್ರತಿಭನಾಕಾರರನ್ನು ಉದ್ದೇಶಿಸಿ ಮಾತನಾಡಿ, ಕಳೆದ ಹದಿಮೂರು ವರ್ಷಗಳಿಂದ ಬಾರದ ಮಳೆ ಮಲೆನಾಡಿಗೆ ಈಗ ಬಂದಿದೆ. ಮಳೆಯಿಂದ ಅನಾಹುತಗಳು ಸಂಭವಿಸಿವೆ. ಸರ್ಕಾರ ಜನರ ರಕ್ಷಣೆಗೆ ಧಾವಿಸಿದೆ. ಸಚಿವರಾದ ದೇಶಪಾಂಡೆ, ಜಾರ್ಜ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾವು-ನೋವು ಸಂಭವಿಸಿದಾಗ ಅಗತ್ಯ ಪರಿಹಾರವನ್ನು ನೀಡಿದ್ದೇವೆ. ರಸ್ತೆ, ಸೇತುವೆಗಳ ದುರಸ್ತಿಗೆ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ರೈತರಿಗೆ ಅಗತ್ಯ ಪರಿಹಾರವನ್ನು ಕೂಡ ಒದಗಿಸುವ ಭರವಸೆ ನೀಡಿದರು.
ಟಿಡಿಪಿ ಸಭೆಯಲ್ಲಿ ಕ್ಷೇತ್ರದ ಸಮಸ್ಯೆಗಳ ಸಂಬಂಧ ಚರ್ಚಿಸಿ ಕ್ರಮ ಕೈಗೊಳ್ಳವ ಭರವಸೆ ನೀಡಿದರು. ಯಾವುದೇ ಸಮಸ್ಯೆಗಳಿಗೆ ತತ್‍ಕ್ಷಣ ಪರಿಹಾರ ಕಂಡುಕೊಳ್ಳುತ್ತೇವೆ ಮತ್ತು ನಾವು ನಿಮ್ಮೊಂದಿಗೆ ಇರುತ್ತೇವೆ ಎಂಬ ಭರವಸೆ ನೀಡಿದರು.