
ಬೆಂಗಳೂರು, ಆ.18-ಅಣ್ಣಮ್ಮ ಜಾತ್ರೆಯ ವೇಳೆ ತಮಿಳು ಹಾಡು ಹಾಕಿದ್ದನ್ನು ಪ್ರಶ್ನಿಸಿದ ಸ್ಥಳೀಯ ಕನ್ನಡಿಗರ ಮೇಲೆ ದೌರ್ಜನ್ಯವೆಸಗಿರುವ ಬಗ್ಗೆ ಆರೋಪ ಕೇಳಿಬಂದಿದೆ.
ಈ ಬಗ್ಗೆ ನಗರ ಪೆÇಲೀಸ್ ಆಯುಕ್ತರಿಗೆ ದೂರು ನೀಡಲು ಕನ್ನಡ ಪರ ಸಂಘಟನೆಗಳು ನಿರ್ಧರಿಸಿವೆ.
ಕೆ.ಪಿ.ಅಗ್ರಹಾರದಲ್ಲಿ ಕಳೆದ ರಾತ್ರಿ ಅಣ್ಣಮ್ಮ ಜಾತ್ರೆ ಏರ್ಪಡಿಸಲಾಗಿತ್ತು. ಜಾತ್ರೆಯ ಆಯೋಜಕರು ತಮಿಳು ಹಾಡುಗಳನ್ನು ಹಾಕಿದ್ದರು. ಆಗ ಅಲ್ಲಿದ್ದ ಕೆಲವರು ಕನ್ನಡ ಹಾಡು ಹಾಕುವಂತೆ ಕೇಳಿದ್ದಾರೆ. ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದಾಗ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಕನ್ನಡಿಗರ ಮೇಲೆ ದೌರ್ಜನ್ಯ ನಡೆದಿದೆ ಎನ್ನಲಾಗಿದೆ.
ವಿಷಯ ತಿಳಿದ ಕೆ.ಪಿ.ಅಗ್ರಹಾರ ಠಾಣೆ ಪೆÇಲೀಸ್ ಇನ್ಸ್‍ಪೆಕ್ಟರ್ ತಕ್ಷಣ ಸ್ಥಳಕ್ಕೆ ಆಗಮಿಸಿ ಎರಡೂ ಕಡೆಯವರನ್ನು ಸಮಾಧಾನ ಪಡಿಸಿ, ಕಳುಹಿಸಿದ್ದಾರೆ.
ಅಣ್ಣಮ್ಮ ಜಾತ್ರೆಯಲ್ಲಿ ಕೆಲವರು ಜಗಳ ನಡೆಸಲು ಪ್ರಯತ್ನಿಸಿದ್ದರು. ತಕ್ಷಣ ಮಧ್ಯಪ್ರವೇಶಿಸಿ ಅದನ್ನು ಬಗೆಹರಿಸಿದ್ದೇವೆ. ಈ ಬಗ್ಗೆ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ ಎಂದು ಕೆ.ಪಿ.ಅಗ್ರಹಾರ ಠಾಣೆಯ ಇನ್ಸ್‍ಪೆಕ್ಟರ್ ತಿಳಿಸಿದ್ದಾರೆ.