ಕೇರಳ ಪ್ರವಾಹ: ವಿವಿಧ ರಾಜ್ಯಗಳ ನೆರವು

ತಿರುವನಂತಪುರಂ:ಆ-18: ಶತಮಾನದ ಅತ್ಯಂತ ಭೀಕರ ಪ್ರವಾಹಕ್ಕೆ ತುತ್ತಾಗಿರುವ ಕೇರಳದಲ್ಲಿ ಈವರೆಗೂ 324 ಮಂದಿ ಬಲಿಯಾಗಿದ್ದು, 1924ರಿಂದ ಆಚೆಗೆ ದಾಖಲಾದ ಅತೀ ಭೀಕರ ಮಟ್ಟದ ಪ್ರವಾಹದ ಪರಿಸ್ಥಿತಿ ಇದಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯಕ್ಕೆ ನೆರವಿನ ಮಹಾಪೂರವೇ ಹರಿದು ಬಂದಿದೆ.

ರಾಜ್ಯದ 12 ಜಿಲ್ಲೆಗಳಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ರೆಡ್‌ ಅಲರ್ಟ್‌ ಘೋಷಿಸಿದ್ದಾರೆ. ಇನ್ನು ಆಪರೇಷನ್‌ ಮದದ್‌ ಹಾಗು ಆಪರೇಷನ್‌ ರಾಹತ್‌ ಮೂಲಕ ಭಾರೀ ಮಟ್ಟದ ವಿಪತ್ತು ನಿರ್ವಹಣಾ ಕಾರ್ಯಾಚರಣೆಗೆ ಸೇನೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಗಳು ಮುಂದಾಗಿವೆ.

ಕೇರಳದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ 500 ಕೋಟಿ ರೂಗಳ ತುರ್ತು ಪರಿಹಾರವನ್ನು ಘೋಷಿಸಿದ್ದಾರೆ.

ಕರ್ನಾಟಕ ಸರ್ಕಾರ ಕಳೆದ ವಾರವೇ ವೈದ್ಯರ ತಂಡ ಮತ್ತು 10 ಕೋಟಿ ಪರಿಹಾರ ಸಾಮಗ್ರಿಗಳನ್ನು ರವಾನಿಸಿದೆ.

ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ 25 ಕೋಟಿ, ಪಂಜಾಬ್‌ ಸಿಎಂ ಅಮರಿಂದರ್‌ ಸಿಂಗ್‌ ಮತ್ತು ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ತಲಾ 10 ಕೋಟಿ ಹಾಗೂ ಆಂಧ್ರ ಪ್ರದೇಶ ಸಿಎಂ ಎನ್‌.ಚಂದ್ರಬಾಬು ನಾಯ್ಡು 5 ಕೋಟಿ ಪರಿಹಾರ ಘೋಷಿಸಿದ್ದಾರೆ.

ಕುಡಿಯುವ ನೀರು ಶುದ್ಧಿಕರಣಕ್ಕಾಗಿ 2 ಕೋಟಿ ಮೌಲ್ಯದ ಶುದ್ಧೀಕರಣ ಯಂತ್ರಗಳನ್ನು ತೆಲಂಗಾಣ ಸರ್ಕಾರ ಒದಗಿಸಿದೆ.

ಒಡಿಶಾ ಸಿಎಂ ನವೀನ್‌ ಪಟ್ನಾಯಕ್ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ಕೋಟಿ ಹಾಗೂ ಅಗ್ನಿಶಾಮಕ, ರಕ್ಷಣಾ ಪಡೆಯ 245 ಸಿಬ್ಬಂದಿ ಮತ್ತು ರಕ್ಷಣಾ ದೋಣಿಗಳನ್ನು ಕಳುಹಿಸುವುದಾಗಿ ತಿಳಿಸಿದ್ದಾರೆ.

ಬಿಹಾರ ಸಿಎಂ ನಿತೀಶ್‌ ಕುಮಾರ್‌ 10 ಕೋಟಿ, ಹರಿಯಾಣ ಸಿಎಂ ಮನೋಹರ್‌ ಲಾಲ್‌ ಖಟ್ಟರ್‌ 10 ಕೋಟಿ, ತಮಿಳುನಾಡು 5 ಕೋಟಿ ಹಾಗೂ ಪುದುಚೇರಿ 2 ಕೋಟಿ ಪರಿಹಾರವನ್ನು ಘೋಷಿಸಿವೆ.

ಇನ್ನು ಕೇರಳದ ಮುಖ್ಯಮಂತ್ರಿ ಪರಿಹಾರ ನಿಧಿಗೆ 2 ಕೋಟಿ ನೀಡುವುದಾಗಿ ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾ(ಎಸ್‌ಬಿಐ) ಘೋಷಿಸಿದೆ ಹಾಗೂ ಕೇರಳದಲ್ಲಿ ತನ್ನ ಬ್ಯಾಂಕ್‌ ಸೇವಾ ಶುಲ್ಕಗಳನ್ನು ಮನ್ನಾ ಮಾಡಿದೆ.

ಆದರೆ, ಬಿಜೆಪಿ ಆಡಳಿತವಿರುವ ಹೆಚ್ಚಿನ ರಾಜ್ಯಗಳು ಜಲಪ್ರಳಯದಲ್ಲಿ ನಲುಗಿರುವ ಕೇರಳಕ್ಕೆ ಈವರೆಗೂ ಯಾವುದೇ ಸಹಾಯ ಘೋಷಣೆ ಮಾಡಿಲ್ಲ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಗೋವಾ, ಚತ್ತೀಸ್‌ಗಢ, ಗುಜರಾತ್‌, ಮಧ್ಯ ಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಈಶಾನ್ಯ ರಾಜ್ಯಗಳು, ಜಾರ್ಖಂಡ್‌, ಜಮ್ಮು–ಕಾಶ್ಮೀರ ಹಾಗೂ ಪಶ್ಚಿಮ ಬಂಗಾಳ(ತೃಣಮೂಲ ಕಾಂಗ್ರೆಸ್‌) ರಾಜ್ಯಗಳಿಂದ ಪರಿಹಾರ ಘೋಷಣೆಯಾಗಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ