ಹಾಸನ: ಹೆಲಿಕಾಪ್ಟರ್ ಕಾರ್ಯಾಚರಣೆ ದುಸ್ತರ ಹಿನ್ನೆಲೆ ಅಪಾಯದಲ್ಲಿ ಸಿಲುಕಿರುವ ರೈಲ್ವೆ ಸಿಬ್ಬಂದಿ ರಕ್ಷಿಸಲು ಸಕಲೇಶಪುರ ಎಸಿ ನೇತೃತ್ವದ ತಂಡದಿಂದ ಕಾರ್ಯಾಚರಣೆ ಆರಂಭವಾಗಿದೆ.
ಸಕಲೇಶಪುರ ತಾಲ್ಲೂಕಿನ ಎಡಕುಮೇರಿ ಬಳಿ ನಿರಂತರ ಮಳೆಯಿಂದ ಗುಡ್ಡಗಳು ಕುಸಿಯುತ್ತಿವೆ. ಪರಿಣಾಮ 16 ಜನ ರೈಲ್ವೆ ಸಿಬ್ಬಂದಿ ರೈಲ್ವೆ ನಿಲ್ದಾಣದಿಂದ ಹೊರ ಬರಲಾಗದೆ ಅಪಾಯದಲ್ಲಿದ್ದಾರೆ. ಹೀಗಾಗಿ ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲು ರೈಲ್ವೆ ಇಲಾಖೆ ಸರ್ಕಾರಕ್ಕೆ ಮನವಿ ಮಾಡಿತ್ತು. ಆದರೆ ಭಾರೀ ಮಳೆಯಾಗುತ್ತಿರುವುದರಿಂದ ಹೆಲಿಕಾಪ್ಟರ್ ಬಳಕೆ ಅಸಾಧ್ಯವಾಗಿದ್ದು, ಪಶ್ಚಿಮ ಘಟ್ಟದ ಟ್ರೆಕ್ಕಿಂಗ್ ಮಾರ್ಗದ ಮೂಲಕ ಕರೆತರಲು ಕಾರ್ಯಾಚರಣೆ ನಡೆಸಲಾಗುತ್ತಿದೆ.
ಬೆಂಗಳೂರು- ಮಂಗಳೂರು ಸಂಪರ್ಕದ ರೈಲು ಮಾರ್ಗದಲ್ಲಿ ಸಿಲುಕಿರುವ ಎಲ್ಲಾ ಸಿಬ್ಬಂದಿಯನ್ನು ರಕ್ಷಿಸಲು ತಂಡ ಕಾಗಿನೆರಿ ಮೂಲಕ ತೆರಳಿದ್ದು, ಮಧ್ಯಾಹ್ನದ ವೇಳೆಗೆ ಅಪಾಯದಲ್ಲಿರುವ ಸಿಬ್ಬಂದಿಗಳನ್ನು ಕರೆತರುವ ನಿರೀಕ್ಷೆ ಇದೆ.