ಬೆಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆ.17ರಂದು ಸರ್ಕಾರಿ ರಜೆ ಘೋಷಣೆ ಮಾಡಿದ್ದರಿಂದ 105 ನಗರ ಸ್ಥಳೀಯ ಸಂಸ್ಥೆಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಆಗಿದ್ದು, ಪರಿಷ್ಕೃತ ವೇಳಾಪಟ್ಟಿಯನ್ನು ಚುನಾವನಾ ಆಯೋಗ ಪ್ರಕಟಿಸಿದೆ.
ಅದರಂತೆ ಆ.29ರ ಬದಲು ಆ.31ಕ್ಕೆ ಮತದಾನ ನಡೆಯಲಿದೆ. ಈ ಹಿಂದಿನ ವೇಳಾಪಟ್ಟಿಯಂತೆ ಆ.17 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿತ್ತು. ಆದರೆ, ಒಂದು ದಿನ ಅವಧಿ ವಿಸ್ತರಿಸಲಾಗಿದ್ದು, ಈಗ ಆ.18 ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕವಾಗಿದೆ.
ನಾಮಪತ್ರ ಪರಿಶೀಲನೆ ಆ.20ರಂದು ನಡೆಯಲಿದ್ದು, ನಾಮಪತ್ರ ವಾಪಸ್ ಪಡೆಯಲು ಆ.23 ಕೊನೆ ದಿನ. ಆ.31ರಂದು ಬೆಳಿಗ್ಗೆ 7ರಿಂದ ಸಂಜೆ ಗಂಟೆ ತನಕ ಮತದಾನ ನಡೆಯಲಿದೆ. ಮರು ಮತದಾನದ ಅವಶ್ಯಕತೆ ಇದ್ದಲ್ಲಿ ಸೆ.2ರಂದು ನಡೆಸಲಾಗುವುದು. ಮತ ಎಣಿಕೆ ಕಾರ್ಯ ಸೆ.3ರಂದು ನಡೆಯಲಿದೆ.
ಉಳಿದಂತೆ ಆ.10ರಿಂದ 16ರವರೆಗಿನ ಚುನಾವಣಾ ಪ್ರಕ್ರಿಯೆ ಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ರಾಜ್ಯ ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.